

ಸಾಗರ: ಗೋಪೂಜೆಯು ಸನಾತನ ಸಂಸ್ಕೃತಿಯ ಪ್ರತೀಕ. ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಹೇಳಿದರು.
ನಗರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಸೂಚನೆ ಮೇರೆಗೆ ಆಯೋಜಿಸಿದ್ದ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಗೋವುಗಳನ್ನು ಸಾಕುವವರ ಸಂಖ್ಯೆ ವಿರಳವಾಗುತ್ತಿದೆ. ಗೋವುಗಳನ್ನು ಸಾಕುವ ಜತೆಯಲ್ಲಿ ಅವುಗಳ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಾಗರ ಮಹಾಗಣಪತಿ ದೇವಸ್ಥಾನದ ಶ್ರೇಯೋಭಿವೃದ್ಧಿಗೆ ನಿರ್ಮಿತಿ ಕೇಂದ್ರದಿಂದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಶಾಸಕರು ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಅನುದಾನ ತರುವುದಾಗಿ ಭರವಸೆ ನೀಡಿದ್ದಾರೆ ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಐ.ವಿ.ಹೆಗಡೆ ಮಾತನಾಡಿ, ಗೋವಿನ ಪೂಜೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಅದನ್ನು ಎಲ್ಲ ಕಡೆಗಳಲ್ಲಿ ಅನುಸರಿಸಬೇಕು ಎಂದು ತಿಳಿಸಿದರು. ಅರ್ಚಕ ಲಕ್ಷ್ಮಣ ಜೋಯ್ಸ, ಡಿ.ದಿನೇಶ್, ಮಂಜುನಾಥ್, ಶ್ರೀಧರ್ ಸಾಗರ, ಬಸಲಿಂಗಪ್ಪ, ವಿಶಾಲ್ ಇತರರಿದ್ದರು.