ತಾಲೂಕಿನಾದ್ಯಂತ ಅಂಟಿಕೆ-ಪಿಂಟಿಕೆ ಸಂಭ್ರಮ

23sor2 a
ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬದಲ್ಲಿ ಚಂದ್ರಗುತ್ತಿ ಚಕ್ರವರ್ತಿ ಹೆಸರಿನ ಹೋರಿಯ ಓಟ.
Published on

ಸೊರಬ: ಮೂರು ದಿನ ಸಂಭ್ರಮ ಸಡಗರದಿಂದ ತಾಲೂಕಿನಾದ್ಯಂತ ದೀಪಾವಳಿ ಹಬ್ಬ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಗೋಪೂಜೆ ಹಾಗೂ ಎತ್ತುಗಳನ್ನು ಶೃಂಗಾರಗೊಳಿಸಿ ಬೆದರಿಸಲಾಯಿತು.

ನರಕ ಚತುರ್ದಶಿ ಹಬ್ಬ, ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಬಲಿಪಾಡ್ಯಮಿ ದಿನ ರಾತ್ರಿ ಅಂಟಿಕೆ-ಪಿಂಟಿಕೆ ನಡೆಯಿತು. ಯುವಕರು ಹಾಡನ್ನು ಹೇಳುತ್ತ ಮನೆಮನೆಗೆ ಭೇಟಿ ನೀಡಿ ಮಲಗಿರುವವರನ್ನು ಎಬ್ಬಿಸಿ ದೀಪ ಕೊಟ್ಟ ಅವರಿಂದ ಸಂಗ್ರಹವಾಗಿದ್ದ ಕಾಯಿ, ಕರಿಗಡುಬು ದೇವಸ್ಥಾನದಲ್ಲಿ ತಂದು ಹಂಚಿಕೊಂಡು ಸಂಭ್ರಮಿಸಿದರು. ಶುಕ್ರವಾರ ವರ್ಷದೊಡಕು ಹಬ್ಬದ ಸಂಭ್ರಮ ನಡೆಯಲಿದೆ.

ಚಂದ್ರಗುತ್ತಿ ಗ್ರಾಮಸ್ಥರು ಗೋವುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಅಗಸೆ ಬಾಗಿಲಿನಿಂದ ಜಾನುವಾರುಗಳನ್ನು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು. ಹಬ್ಬದ ಹೋರಿಗಳಾದ ಚಂದ್ರಗುತ್ತಿ ಚಕ್ರವರ್ತಿ, ಚಂದ್ರಗುತ್ತಿಯ ನಾನೇ ಉಪೇಂದ್ರ ಹಾಗೂ ವಿವಿಧ ಹೆಸರಿನ ಹೋರಿಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಮನೆ ಮನೆ ಬಾಗಿಲುಗಳಲ್ಲಿ ಮಾವಿನ ಎಲೆಗಳ ತೋರಣ ಅಲಂಕರಿಸಲಾಗಿತ್ತು. ಮನೆ ಅಂಗಳದ ಮುಂಭಾಗದಲ್ಲಿ ಬಿಡಿಸಿದ ಆಕರ್ಷಕ ರಂಗೋಲಿ ಚಿತ್ತಾರಗಳು ಗಮನ ಸೆಳೆದವು. ರೈತರು ಹೊಲ ಗದ್ದೆಗಳಲ್ಲಿ ಬೆಳೆದ ಫಸಲು ತಂದು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚಂದ್ರಗುತ್ತಿ ಸಮೀಪದ ಕತವಾಯಿ ಗ್ರಾಮದಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನ ಅನಾದಿ ಕಾಲದಿಂದಲೂ ರೂಢಿಸಿಕೊಂಡು ಬಂದ ಸಾಂಪ್ರದಾಯಿಕ ಪದ್ಧತಿಯನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಉಪವಾಸ ವ್ರತಾಚರಣೆ ಮಾಡಿ ಗ್ರಾಮದಲ್ಲಿರುವ ಶ್ರೀ ಹಾಲು ಸ್ವಾಮಿ ಕಲ್ಮಠ ಗದ್ದುಗೆಗೆ ಲಕ್ಷಾಂತರ ಕರ್ಪೂರ ಬೆಳಗುವುದರ ಮೂಲಕ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net