

ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರವು ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದ ಬರುತ್ತಲೇ ಇತ್ತು. ಈಗ ಚಿತ್ರದ ಹಿಂದಿಯ ರೀಮೇಕ್ ಹಕ್ಕುಗಳನ್ನು ಬಿ4ಯೂ ಮೂವೀಸ್ ಸಂಸ್ಥೆಯು ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಉತ್ತರ ಭಾರತದ ಡಬ್ಬಿಂಗ್ ರೈಟ್ಸ್ಗಳನ್ನು ಸಹ ಅದೇ ಸಂಸ್ಥೆ ಪಡೆದಿದೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ಆಕಾಶ್ ಶ್ರೀವತ್ಸ, ಬಿ4ಯೂ ಚಾನಲ್ನವರು ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಮತ್ತು ಉತ್ತರ ಭಾರತದ ಬೇರೆಬೇರೆ ಭಾಷೆಗಳಿಗೆ ಡಬ್ ಮಾಡಲು ಮುಂದಾಗಿದೆ. ಈಗಾಗಲೇ ಅಗ್ರೀಮೆಂಟ್ ಸಹ ಮುಗಿದಿದೆ’ ಎನ್ನುತ್ತಾರೆ ಅವರು. ಬರೀ ಹಿಂದಿಯಷ್ಟೇ ಅಲ್ಲ, ತಮಿಳು, ತುಳು ಮತ್ತು ಮಲಯಾಳಂ ಭಾಷೆಗಳಿಗೆ ರೀಮೇಕ್ ಆಗುವ ಚರ್ಚೆಗಳೂ ಆಗುತ್ತಿವೆಯಂತೆ.
ಈ ಮಧ್ಯೆ, ‘ಶಿವಾಜಿ ಸುರತ್ಕಲ್ 2’ ಕಥೆ ಬರೆಯುತ್ತಿರುವುದಾಗಿ ಆಕಾಶ್ ಹಿಂದೊಮ್ಮೆ ಹೇಳಿಕೊಂಡಿದ್ದರು. ಆ ಕೆಲಸ ಇದೀಗ ಚಾಲ್ತಿಯಲ್ಲಿದೆಯಂತೆ. ‘ಈ ಮುಂಚೆ ನಾವು, ‘ಶಿವಾಜಿ ಸುರತ್ಕಲ್ 2’ ಮಾಡಬೇಕೆಂಬ ಯೋಚನೆಯಲ್ಲಿದ್ದೆವು. ಕಥೆ ಬರೆಯುತ್ತಾ ಬರೆಯುತ್ತಾ ದೊಡ್ಡದಾಗಿ, ಎರಡು ಚಿತ್ರಗಳಿಗಾಗುವಷ್ಟು ಆಗಿವೆ. ಬರೀ ಪಾರ್ಟ್ 2 ಅಷ್ಟೇ ಅಲ್ಲ, ಪಾರ್ಟ್ 3 ಆದರೂ ಆಶ್ಚರ್ಯವಿಲ್ಲ. ಅಂದರೆ, ‘ಶಿವಾಜಿ ಸುರತ್ಕಲ್’ ಚಿತ್ರವು ಪಾರ್ಟ್ 2ನ ಸೀಕ್ವೆಲ್ ಆಗಿರುತ್ತದೆ’ಎನ್ನುತ್ತಾರೆ ಅವರು.