

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಂದುಗೂಡಿದ್ದು, ಈ ನಿಟ್ಟಿನಲ್ಲಿ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಮುಂಬೈನಲ್ಲಿ I.N.D.I.A ಒಕ್ಕೂಟದ ಮೂರನೇ ಸಭೆಯನ್ನೂ ನಡೆಸಲಾಗುವುದು ಎಂದು ಶಿವಸೇನೆಯ(ಉದ್ಧವ್ ಠಾಕ್ರೆ ಬಣ) ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ತಿಳಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ನಾಯಕರ ಜೊತೆ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವುತ್ ಮುಂಬೈನಲ್ಲಿ ನಡೆಯಲಿರುವ I.N.D.I.A ಒಕ್ಕೂಟದ ಮೀಟಿಂಗ್ನ ನೇತೃತ್ವವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪಟನಾ ಹಾಗೂ ಬೆಂಗಳೂರಿನ ರೀತಿಯಲ್ಲೇ ಮುಂಬೈನಲ್ಲಿ ನಡೆಯುವ ಸಭೆಯೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಹಾ ವಿಕಾಸ್ ಅಘಾಡಿಯ ಪ್ರತಿಯೊಬ್ಬ ನಾಯಕರಿಗೂ ಜವಾಬ್ದಾರಿಗಳನ್ನು ವಹಿಸಲಾಗಿದೆ. ಮುಂಬೈನ ಗ್ರ್ಯಾಂಡ್ ಹಯಾಟ್ ಹೋಟೆಲ್ನಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಲಿದೆ. ಸಭೆಗೆ ಆಗಮಿಸುತ್ತಿರುವ ನಾಯಕರ ಭದ್ರತೆ, ವಾಹನ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರದೊಂದಿಗೆ ಮಹಾ ವಿಕಾಸ್ ಅಘಾಡಿಯ ನಾಯಕರು ಮಾತನಾಡಲಿದ್ದಾರೆ ಎಂದು ಶಿವಸೇನೆಯ(ಉದ್ಧವ್ ಠಾಕ್ರೆ ಬಣ) ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ತಿಳಿಸಿದ್ದಾರೆ.
ಜೂನ್ 23ರಂದು ಬಿಹಾರದ ಪಟನಾದಲ್ಲಿ, ಜುಲೈ 13, 14ರಂದು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.Aದ ಸಭೆ ನಡೆಸಲಾಗಿತ್ತು. ಬಿಹಾರದ ಪಟನಾದಲ್ಲಿ ನಡೆದ ಸಭೆಯ ನೇತೃತ್ವವನ್ನು ಸಿಎಂ ನಿತೀಶ್ ಕುಮಾರ್ ವಹಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಸಭೆಯ ನೇತೃತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದರು.