ಶಿರೂರು ದುರಂತ ನಾಪತ್ತೆಯಾದವರ ಶೋಧಕ್ಕೆ ಆಗ್ರಹಿಸಿ ಡಿಸಿ ಕಚೇರಿಯ ಎದುರು ಧರಣಿ

Protest-
Published on

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವವರನ್ನು ಆಧುನಿಕ ಯಂತ್ರೋಪಕರಣ ಬಳಸಿ ಹುಡುಕಾಟ ನಡೆಸಬೇಕು. ಕುಸಿತದಿಂದ ಬಾಧಿತರಾಗಿರುವವರ ಕುಟುಂಬಸ್ಥರಿಗೆ ಎನ್‌ಎಚ್‌ಎಐ ಅಥವಾ ಐಆರ್‌ಬಿಯಿಂದ ಹೆಚ್ಚಿನ ಪರಿಹಾರ, ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಸಂತ್ರಸ್ಥರ ಕುಟುಂಬದವರು ರಾಷ್ಟ್ರೀಯ ಆರ್ಯ ಈಡಿಗ ಮಹಾ ಮಂಡಳಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಧರಣಿ ಕುಳಿತ ಕುಟುಂಭಸ್ಥರು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರ ಮೂಲಕ ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಕಾರವಾರ-ಕುಂದಾಪುರ ಚತುಷ್ಪಥ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿಯ ನಿರ್ಲಕ್ಷ್ಯದಿಂದ ಶಿರೂರು ದುರ್ಘಟನೆ ಸಂಭವಿಸಿದೆ. ಅಂಕೋಲಾ ನ್ಯಾಯಾಲಯದ ನಿರ್ದೇಶನದಂತೆ ಐಆರ್‌ಬಿಯ ಐವರು ನಿರ್ದೇಶಕರ ವಿರುದ್ಧ ಅಂಕೋಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಇದುವರೆಗೂ ಐಆರ್‌ಬಿಯ ಒಬ್ಬರನ್ನೂ ಪೊಲೀಸರು ಬಂಧಿಸಿಲ್ಲ.
ಇದೊಂದು ಸಾಂಕೇತಿಕ ಹೋರಾಟ. ಈ ವಿಚಾರವನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ. ಎನ್‌ಎಚ್‌ಎಐ ದುರ್ವವಹಾರಗಳ ಕುರಿತು ನಾವು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಐಆರ್‌ಬಿ, ಎನ್‌ಎಚ್‌ಎಐ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಮುಂದೆ ದೆಹಲಿವರೆಗೂ ಪಾದಯಾತ್ರೆಗೂ ಸಿದ್ಧರಿದ್ದೇವೆ ಎಂದರು.
ದುರಂತದಲ್ಲಿ ನಾಮಧಾರಿ ಸಮುದಾಯದ 8 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಆದರೆ, ನಾಮಧಾರಿ ರಾಜಕಾರಣಿಗಳು ಸ್ಪಂದನೆ ನೀಡಿಲ್ಲ. ಅವರ ಬೆನ್ನಿಗೆ ನಿಂತಿಲ್ಲ. ಮುಂದಿನ ದಿನದಲ್ಲಿ ಆ ವಿಚಾರ ನಿಮಗೆ ಮುಳುವಾಗಲಿದೆ ಎಂದು ಎಚ್ಚರಿಸಿದರು.
ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಉಕ ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಚಿನ್ ನಾಯ್ಕ, ಅಂಕೋಲಾ ಅಧ್ಯಕ್ಷ ದಾಮೋದರ ನಾಯ್ಕ, ಹಾಗೂ ಇತರ ಪದಾಽಕಾರಿಗಳಾದ ಶ್ರೀನಿವಾಸ ನಾಯ್ಕ, ನಾಗರಾಜ ನಾಯ್ಕ, ವಾಸುದೇವ ನಾಯ್ಕ, ಸಚಿನ್ ಹೊನ್ನಾವರ, ವಿನೋದ ನಾಯ್ಕ, ಗಣೇಶ ನಾಯ್ಕ, ಕೇರಳದ ರಾಜನ್, ಪ್ರದೀಪ ತಾಂಡೇಲ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net