

ಕಾರವಾರ :ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಮೂವರು ಹಾಗೂ ಲಾರಿಯ ಹುಡುಕಾಟಕ್ಕೆ ನಾವು ಡ್ರಜ್ಜಿಂಗ್ ಯಂತ್ರ ತರಿಸುತ್ತೇವೆ. ಕಾರ್ಯಾಚರಣೆ ಪುನರಾರಂಭಿಸಿ ಎಂದು ಕೇರಳ ಕೊಜಿಕೊಡೆ ಎಂಪಿ ಎಂ.ಕೆ.ರಾಘವನ್ ಅವರ ನೇತೃತ್ವ ನಿಯೋಗ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.
ನಾವು ಕಾರ್ಯಾಚರಣೆ ಸ್ಥಗಿತ ಮಾಡಿದ್ದೇವೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ನೀಡಿದ ಜಿಲ್ಲಾಡಳಿತವನ್ನು ಇದು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಎಂ.ಕೆ.ರಾಘವನ್, ಕಾಸರಕೋಡು ಎಂಎಲ್‌ಎ ಎಂ.ಕೆ.ಅಶ್ರಫ್ ಹಾಗೂ ಅವರ ನಿಯೋಗವು ಸಿಎಂ ಜತೆ ಚರ್ಚಿಸಿತು.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ವಿವಿಧ ಏಜೆನ್ಸಿಗಳ ಜತೆ ಸೇರಿ ಉತ್ತರ ಕನ್ನಡ ಜಿಲ್ಲಾಡ ಸಾಕಷ್ಟು ಪ್ರಯತ್ನ ಮಾಡಿದೆ. ನಾವು ಅದನ್ನು ಶ್ಲಾಘಿಸುತ್ತೇವೆ. ಅದರ ಹೊರತಾಗಿಯೂ ಇನ್ನೂ ಕೇರಳ ಕೊಜಿಕೊಡೆ ಮೂಲದ ಅರ್ಜುನ್ ಎಂಬ ಚಾಲಕ, ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ದೇಹಗಳು ಇದುವರೆಗೂ ಸಿಕ್ಕಿಲ್ಲ.
ಗಂಗಾವಳಿ ನದಿಯಲ್ಲಿ ಡ್ರಜ್ಜರ್ ತಂದು ಹೂಳು ತೆಗೆದು ಹುಡುಕಾಟ ನಡೆಸಿದಲ್ಲಿ ಮೃತರ ದೇಹಗಳು ಸಿಗುವ ಸಾಧ್ಯತೆ ಇದೆ. ಇದರಿಂದ ಡ್ರಜ್ಜರ್ ತರಲು ಅನುಮತಿ ತರಬೇಕು. ಹುಡುಕಾಟದ ಕಾರ್ಯಾಚರಣೆಯನ್ನು ಪುನರಾರಂಭಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಎಂ.ಕೆ.ರಾಘವನ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.