ಮುನಿಸಿಕೊಂಡವರ ಮನವೊಲಿಕೆಗೆ ದೊಡ್ಡಗೌಡರ ಕಸರತ್ತು!

shira jds meeting
Published on

ತುಮಕೂರು: ಜೆಡಿಎಸ್ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಾಸಕ ಬಿಎಂಎಲ್ ಕಾಂತರಾಜು ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಜತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮನವೊಲಿಕೆ ಕಸರತ್ತು ನಡೆಸಿದ್ದಾರೆ.

ಈ ಮೂವರು ಪ್ರಮುಖ‌ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ಜಿಲ್ಲೆಯಲ್ಲಿದೆ. ಈ ನಡುವೆ ದೇವೇಗೌಡರ ಇಂದಿನ ಭೇಟಿ ಮಹತ್ವ ಪಡೆದಿದೆ. ಮುನಿಸಿಕೊಂಡ ಮುಖಂಡರೊಂದಿಗೆ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ನಿವಾಸದಲ್ಲಿ ಶುಕ್ರವಾರ ದೇವೇಗೌಡರು ಸಂಧಾನ ಸಭೆ ನಡೆಸಿದ್ದಾರೆ.

ಎಸ್​.ಆರ್​.ಶ್ರೀನಿವಾಸ್​, ಬಿಎಂಎಲ್​ ಕಾಂತರಾಜು ಹಾಗೂಸಿ.ಬಿ.ಸುರೇಶ್​ಬಾಬು ಜತೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ದೇವೇಗೌಡರು, ಪಕ್ಷದ ಪರ ಕೆಲಸ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ. ದೇವೇಗೌಡರ ಬಗ್ಗೆ ಗೌರವರಿಂದಲೇ ನಡೆದುಕೊಂಡಿರುವ ಮೂವರು ನಾಯಕರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಬಗ್ಗೆ ದೂರುಗಳ ಸುರಿಮಳೆಗೈದಿದ್ದು ವಿಧಾನ ಪರಿಷತ್​ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಶಿರಾ ಉಪಸಮರದಲ್ಲೂ ಕಾಣಿಸಿಕೊಂಡಿದ್ದಾರೆ.

ಕಾಂಗ್ರೆಸ್​ ಕಡೆ ವಾಲಿರುವ ಮುಖಂಡರು?: ಎಸ್​.ಆರ್​.ಶ್ರೀನಿವಾಸ್​ ನೇತೃತ್ವದಲ್ಲಿ ಪ್ರಮುಖ ಮೂವರು ನಾಯಕರು ಡಿ.ಕೆ.ಶಿವಕುಮಾರ್​ ಸಂಪರ್ಕದಲ್ಲಿದ್ದರು, ಮುಂಬರುವ ವಿಭಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಅರಿತು ದೇವೇಗೌಡರು ನಡೆಸಿದ ಸಂಧಾನ ತಾತ್ಕಾಲಿಕ ಯಶಸ್ಸು ಕಂಡಿದೆ. ಶುಕ್ರವಾರ ಸಂಜೆ ಶಿರಾ ಉಪಸಮರದಲ್ಲಿ ದೇವೇಗೌಡರ ಜತೆಯಲ್ಲಿ ಮೂವರು ರೆಬೆಲ್​ ಮುಖಂಡರು ಕಾಣಿಸಿಕೊಂಡಿದ್ದು, ಮುನಿಸು ತಾತ್ಕಾಲಿಕ ಶಮನವಾಗಿದೆ.

ನನಗೆ ಕರೊನಾ ವೈರಸ್​ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಶುಕ್ರವಾರ ದೇವೇಗೌಡರೊಂದಿಗೆ ಮಾತನಾಡಿದ್ದು, ಸಂಜೆಯಿಂದಲೇ ನಮ್ಮ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಸ್​.ಆರ್​.ಶ್ರೀನಿವಾಸ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net