

ತುಮಕೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ರೈತರು ಕುರಿಮರಿ ನೀಡಿ ಋಣಭಾರ ತೀರಿಸಿದರು.
ಶಿರಾ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಮತಯಾಚಿಸಲು ಎಚ್ಡಿಕೆ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬರಗೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಕುಮಾರಸ್ವಾಮಿ ಅವರನ್ನು ಮಾರ್ಗಮಧ್ಯೆ ಸೀಗಲಹಳ್ಳಿಯಲ್ಲಿ ಜನರು ವಿಶೇಷವಾಗಿ ಸನ್ಮಾನಿಸಿದರು.
ರೈತರ ಸಾಲಮನ್ನಾ ಮಾಡಿದ ಕೃತಜ್ಞತಾ ಪೂರ್ವಕವಾಗಿ ರೈತರು ಹೊಲದಲ್ಲಿ ಬೆಳೆದಿದ್ದ ಪದಾರ್ಥಗಳು ಹಾಗೂ ಕುರಿಮರಿಯನ್ನು ಎಚ್ಡಿಕೆಗೆ ನೀಡಿ ಋಣಭಾರ ತೀರಿಸಿದರು.
ಈ ಸಂದರ್ಭದಲ್ಲಿ ರೈತರ ಸನ್ಮಾನ ಸ್ವೀಕರಿಸಿದ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು. ರೈತರಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡುವ ಕನಸಿದ್ದು ಜೆಡಿಎಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ದಿನ ನನ್ನ ಕನಸು ನನಸಾಗಲಿದೆ ಎಂದರು.