

ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ನ ಭದ್ರಕೋಟೆಯನ್ನು ನುಚ್ಚುನೂರು ಮಾಡಲಾಗಿದೆ. ಆ ಎರಡೂ ಪಕ್ಷಗಳ ಯಾವ ಶಕ್ತಿಯೂ ನಮ್ಮ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಅಬ್ಬರಿಸಿದರು.
ಶಿರಾ ಉಪಸಮರ ಹಿನ್ನೆಲೆಯಲ್ಲಿ ಶುಕ್ರವಾರ ಮದಲೂರಿನಲ್ಲಿ "ವಿಜಯ ಸಂಕಲ್ಪ ಯಾತ್ರೆ"ಗೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, ಕಾಂಗ್ರೆಸ್-ಜೆಡಿಎಸ್ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ. ಮದಲೂರು ಕೆರೆಗೆ ನೀರು ಬಿಡಲು ನಾನು ಹಿಂದೆ ಹಣ ಬಿಡುಗಡೆ ಮಾಡಿದ್ದೇನೆ. 6 ತಿಂಗಳಲ್ಲಿ ನೀರು ಹರಿಸುವೆ. ಯಡಿಯೂರಪ್ಪ ಕೊಟ್ಟ ಭರವಸೆ ಹುಸಿಯಾಗಿಲ್ಲ. ನನ್ನ ಬಾಯಿಯಿಂದ ಬರೋದು ಅಕ್ಷರಶಃ ಸತ್ಯವಾಗುತ್ತೆ ಎಂದು ಭರವಸೆ ನೀಡಿದರು.
ಮಹಿಳಾ ಸಬಲೀಕರಣಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ. ನನ್ನ ಬಾಯಿಯಿಂದ ಬರೋದು ಅಕ್ಷರಶಃ ಸತ್ಯವಾಗುತ್ತೆ. ನೀವು ನೆಮ್ಮದಿ-ಶಾಂತಿಯಿಂದ ಬದುಕುವಂತೆ ಮಾಡುತ್ತೇನೆ. ಶಿರಾ ತಾಲೂಕನ್ನು ಶಿಕಾರಿಪುರ ತಾಲೂಕಿನಂತೆ ಮಾಡುತ್ತೇನೆ ಎಂದು ಭರವಸೆಯಿತ್ತರು. ಚುನಾವಣೆ ಮುಗಿದ ಮೇಲೆ 4-5ನೇ ತಾರೀಖಿನಂದು ಚರ್ಚೆ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.