ಮತ್ತೆ ಕನ್ನಡಕ್ಕೆ ಶಿಲ್ಪಾ ಶೆಟ್ಟಿ; ಪ್ರೇಮ್​ ನಿರ್ದೇಶನದ 'ಕೆಡಿ' ಚಿತ್ರದಲ್ಲಿ ನಟನೆ

KD - Shilpa Shetty
Published on

ಬೆಂಗಳೂರು: ಕೊನೆಗೂ ಸುದ್ದಿ ನಿಜವಾಗಿದೆ. 'ಜೋಗಿ' ಪ್ರೇಮ್​ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ 'ಕೆಡಿ - ದಿ ಡೆವಿಲ್​'ನಲ್ಲಿ ಶಿಲ್ಪಾ ನಟಿಸುತ್ತಾರೆ ಎಂಬ ಸುದ್ದಿ ಕೆಲವು ತಿಂಗಳುಗಳಿಂದ ಇದ್ದೇ ಇತ್ತು. ಅದೀಗ ನಿಜವಾಗಿದೆ.

ಯುಗಾದಿ ಹಬ್ಬದ ಪ್ರಯುಕ್ತ ಸ್ವತಃ ಪ್ರೇಮ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ. 'ಕೆಡಿ - ದಿ ಡೆವಿಲ್​' ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸುವುದರ ಜತೆಗೆ, ಹೊಸ ಪೋಸ್ಟರ್​ ಸಹ ಬಿಡುಗಡೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿಗೆ ಕನ್ನಡ ಚಿತ್ರರಂಗ ಹೊಸದಲ್ಲ. ಈಗಾಗಲೇ ಅವರು ರವಿಚಂದ್ರನ್​ ಅಭಿನಯದ 'ಪ್ರೀತ್ಸೋದ್​ ತಪ್ಪಾ' ಮತ್ತು ಉಪೇಂದ್ರ ಅಭಿನಯದ 'ಆಟೋ ಶಂಕರ್​' ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ಬಹಳ ದೊಡ್ಡ ಗ್ಯಾಪ್​ನ ನಂತರ ಅವರು ಪುನಃ 'ಕೆಡಿ' ಚಿತ್ರದ ಮೂಲಕ ಕನ್ನಡಕ್ಕೆ ವಾಪಸ್ಸಾಗಿದ್ದಾರೆ.

'ಕೆಡಿ - ದಿ ಡೆವಿಲ್​' ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ಶಿಲ್ಪಾ ಶೆಟ್ಟಿ ಜತೆಗೆ ಸಂಜಯ್​ ದತ್​, ರವಿಚಂದ್ರನ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದ, ಬೇರೆ ಭಾಷೆಗಳ ಜನಪ್ರಿಯ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದ ಈ ಚಿತ್ರಕ್ಕೆ ಪ್ರೇಮ್​ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಅರ್ಜುನ್​ ಜನ್ಯ ಸಂಗೀತ, ವಿಲಿಯಂ ಡೇವಿಡ್​ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net