

ನವದೆಹಲಿ: ಟೀಮ್ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಇಂದು ಸಂಚಲನಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ಧವನ್ ಭಾವುಕ ವಿದಾಯ ಹೇಳಿದ್ದು, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ತಮ್ಮ ಕ್ರಿಕೆಟ್ ಪಯಣ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. ಇಷ್ಟು ವರ್ಷಗಳ ಕಾಲ ದೇಶಕ್ಕಾಗಿ ಆಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಗಬ್ಬರ್ ಹೇಳಿದ್ದಾರೆ. ನನ್ನ ಕ್ರಿಕೆಟ್ ಪಯಣದಲ್ಲಿ ಅನೇಕರು ನನಗೆ ಸಹಾಯ ಮಾಡಿದ್ದು, ಅವರೆಲ್ಲರ ಸಹಕಾರದಿಂದಲೇ ತಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು. ತಮ್ಮ ವೃತ್ತಿಜೀವನಕ್ಕೆ ಬೆಂಬಲ ನೀಡಿದ ಬಿಸಿಸಿಐ, ಡಿಡಿಸಿಎ ಮತ್ತು ಅಭಿಮಾನಿಗಳಿಗೆ ಧವನ್ ಧನ್ಯವಾದ ತಿಳಿಸಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಧವನ್ ನಿವೃತ್ತಿ ನಿರ್ಧಾರದ ಹಿಂದಿನ ಅಸಲಿ ಕಾರಣಗಳ ಬಗ್ಗೆ ಕೇಳಲು ಪ್ರಾರಂಭಿಸಿದ್ದಾರೆ.
ಸುಮಾರು ಒಂದು ದಶಕದ ಕಾಲ ತಮ್ಮ ಅಮೋಘ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಳ್ಳೆಯ ಹೆಸರು ಮಾಡಿದ ಧವನ್, ಕಾಲಾನಂತರದಲ್ಲಿ ತಮ್ಮ ಫಾರ್ಮ್ ಕಳೆದುಕೊಂಡರು. ಇತ್ತ ಯುವ ಕ್ರಿಕೆಟಿಗರು ಕಠಿಣ ಸ್ಪರ್ಧೆಯನ್ನು ಒಡ್ಡಿದ್ದರಿಂದ ಧವನ್ ಮರುಪ್ರವೇಶ ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾಗೆ ಮತ್ತೆ ಎಂಟ್ರಿ ಕೊಡಲು ಧವನ್ ಸಾಕಷ್ಟು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ.
ಇನ್ನು ಪದೇಪದೆ ಗಾಯದ ಸಮಸ್ಯೆ ಕಾಡಿದ್ದು ಕೂಡ ಧವನ್ ಅವರ ವೃತ್ತಿಜೀವನಕ್ಕೆ ಶಾಪವಾಯಿತು. ಗಾಯದ ಸಮಸ್ಯೆಯಿಂದಾಗಿ ಗಬ್ಬರ್ ಈ ವರ್ಷ ಐಪಿಎಲ್‌ನಲ್ಲಿ ಅರ್ಧದಷ್ಟು ಪಂದ್ಯಗಳಿಂದ ಹೊರಗುಳಿದರು. ಸದ್ಯ ಧವನ್ ವಯಸ್ಸು 38. ಅವರೇನು ತಮ್ಮ ಫಾರ್ಮ್ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದರೆ ಮತ್ತು ಸರಿಯಾಗಿ ಯೋಜಿಸಿದ್ದರೆ, ಇನ್ನೂ ಎರಡರಿಂದ ಮೂರು ವರ್ಷಗಳ ಕಾಲ ಸುಲಭವಾಗಿ ಆಡಬಹುದು. 43ರ ಹರೆಯದ ಧೋನಿ ಗಾಯದ ನಡುವೆಯೂ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಧವನ್ ಕೊಂಚ ಪ್ಲಾನ್ ಮಾಡಿಕೊಂಡಿದ್ದರೆ ಕ್ರಿಕೆಟ್‌ನಲ್ಲಿ ಇನ್ನು ಸ್ವಲ್ಪ ದಿನ ಮುಂದುವರಿಯಬಹುದಿತ್ತು. ಆದರೆ ದೇಹ ಸಹಕರಿಸದ ಕಾರಣ ಮತ್ತು ಭಾರತ ತಂಡಕ್ಕೆ ವಾಪಾಸ್ ಬರಲು ಅವಕಾಶ ಇಲ್ಲದ ಕಾರಣ ನಿವೃತ್ತಿಯಾಗುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಧವನ್ ಐಪಿಎಲ್‌ನಲ್ಲಿ ಮುಂದುವರಿಯಲಿದ್ದಾರೆ. ಸದ್ಯ ಧವನ್ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಫಾರ್ಮ್ ನಷ್ಟ ಮತ್ತು ಗಾಯದಿಂದಾಗಿ ಈ ವರ್ಷಾಂತ್ಯದಲ್ಲಿ ಧವನ್ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲೂ ಉಳಿಸಿಕೊಳ್ಳುವುದು ಕಷ್ಟ. ಹರಾಜಿಗೆ ಬಂದು ಮಾರಾಟವಾಗದಿದ್ದರೆ ಅವಮಾನ ಆಗಬಹುದು. ಈ ವಿಚಾರದಲ್ಲಿ ಧವನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಶೀಘ್ರದಲ್ಲೇ ಮುಂದಿನ ಯೋಜನೆಗಳನ್ನು ಪ್ರಕಟಿಸುವುದಾಗಿಯೂ ಧವನ್ ತಿಳಿಸಿದ್ದಾರೆ.
ಅಂದಹಾಗೆ ಧವನ್ 14 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 167 ಏಕದಿನ ಪಂದ್ಯಗಳನ್ನು ಆಡಿದ್ದು, 6,793 ರನ್ ಗಳಿಸಿದ್ದಾರೆ. 34 ಟೆಸ್ಟ್‌ಗಳಲ್ಲಿ 2,315 ಮತ್ತು 68 ಟಿ20 ಪಂದ್ಯಗಳಲ್ಲಿ 1,759 ರನ್ ಗಳಿಸಿದ್ದಾರೆ. ಭಾರತ ಚಾಂಪಿಯನ್ಸ್ ಟ್ರೋಫಿ-2013 ಗೆಲ್ಲುವಲ್ಲಿ ಧವನ್ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಅವರು 5 ಪಂದ್ಯಗಳಲ್ಲಿ 363 ರನ್ ಗಳಿಸಿದ್ದರು. (ಏಜೆನ್ಸೀಸ್)