ಮನೆ ಆವರಣದಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಘರ್ಷಣೆ : ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಸ್ಪಷ್ಟನೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಳೆಂಜ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂಬುವರು ವಿಜಯೋತ್ಸವದ ನೆಪದಲ್ಲಿ ಗ್ರಾಮದ ಕಜೆ ಮನೆಯ ಕುಶಾಲಪ್ಪ ಗೌಡರ ಮನೆ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಟಾಕಿ ಸಿಡಿಸಿದ್ದರು. ಮನೆಯಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ತನ್ನ ಕುಟುಂಬದ ರಕ್ಷಣೆಗಾಗಿ ಕುಶಾಲಪ್ಪ ಗೌಡರು ಪ್ರತಿರೋಧ ತೋರಿದ್ದು, ಘಟನೆಯಲ್ಲಿ ಗಾಯಗಳಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಹೇಳಿದರು.

ಗುರುವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 144 ಸೆಕ್ಷನ್ ಜಾರಿಯಲ್ಲಿದ್ದರೂ ಮನೆಯ ಆವರಣಕ್ಕೆ ಬಂದು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳಿಗೆ ತೊಂದರೆ ಉಂಟುಮಾಡಿದ್ದಾರೆ. ಈ ಸಮಯ ಪರಸ್ಪರ ಹಲ್ಲೆ ನಡೆದಿರುವುದು ವಿಷಾದನೀಯ. ಆದರೆ ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಬಳಸಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೆಸರನ್ನು ಎಳೆದು ತಂದಿರುವುದು ದುರದೃಷ್ಟಕರ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ವಶಕ್ಕೆ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಬೆಳ್ತಂಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೂ ರಕ್ಷಿತಾ ಶಿವರಾಂ ಹೆಸರನ್ನು ಎಳೆದು ತರುತ್ತಿರುವುದು ಬಿಜೆಪಿಗೆ ಚಾಳಿ. ಬಿಜೆಪಿ ಮಂಡಲ ಅಧ್ಯಕ್ಷರು ಕಾನೂನಿನ ಪರಿಜ್ಞಾನವಿಲ್ಲದೆ ಮತ್ತು ವಾಸ್ತವ ಅರಿತುಕೊಳ್ಳದೆ ಮಾತನಾಡಿರುವುದು ಖಂಡನೀಯ ಎಂದರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ನಗರ ಅಧ್ಯಕ್ಷ ಸತೀಶ್ ಕೆ.ಬಂಗೇರ ಕಾಶಿಪಟ್ಣ, ನಗರ ಎಸ್.ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ, ಗ್ರಾಮೀಣ ಎಸ್.ಸಿ ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಅಕ್ರಮ-ಸಕ್ರಮ ಸದಸ್ಯ ಶ್ರೀಧರ್ ಕಳೆಂಜ, ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಜೈಸನ್ ಪಟ್ಟೇರಿ, ಮುಖಂಡರಾದ ಬಿ.ಕೆ.ವಸಂತ್, ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net