ತಾಪ ತಗ್ಗಿಸಲು ತಾರಸಿ ಮೇಲೆ ಶೀಟ್ ರೂಫಿಂಗ್; ಮಳೆ ನೀರು ಸೋರಿಕೆಗೂ ಪರಿಹಾರ

roof
Published on

ಬೆಂಗಳೂರು: ಸಾಮಾನ್ಯವಾಗಿ ತಾರಸಿ ಮನೆಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ಬೇಸಿಗೆಯ ವೇಳೆ ಉಂಟಾಗುವ ತಾಪಮಾನದಿಂದ ಮನೆಯ ಒಳಗಡೆ ಇರುವುದು ಕಷ್ಟವಾಗುತ್ತಿದೆ. ಇದಕೊಂದು ಸರಳ ಪರಿಹಾರ ತಾರಸಿ ಮೇಲೆ ಶೀಟ್ ರೂಫಿಂಗ್ ಅಳವಡಿಕೆ.

ಶೀಟ್ ರೂಫಿಂಗ್ ಈಗ ಬಹುತೇಕ ಮನೆ ಮತ್ತಿತರ ಕಟ್ಟಡಗಳ ಮೇಲೆ ಹೆಚ್ಚಾಗುತ್ತಿದೆ. ಹೊಸದಾಗಿ ಮನೆ ಕಟ್ಟುವವರು ಇದಕ್ಕೆ ಮೊದಲೇ ಯೋಜನೆ ರೂಪಿಸಿಕೊಂಡು ಕಟ್ಟಡದ ಮೇಲೆ ್ಯಾಬ್ರಿಕೇಶನ್ ವರ್ಕ್ ಮಾಡಿಸಿ ಅದರ ಮೇಲೆ ಶೀಟ್ ಹಾಕಿಸುತ್ತಿದ್ದಾರೆ. ಜೊತೆಗೆ ಹಳೇಯ ಮನೆಗಳವರು ಕೂಡಾ ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ತಾರಸಿ ಮೇಲೆ ಶೀಟ್ ಹಾಕಿಸುತ್ತಿದ್ದಾರೆ.

ಮಾರ್ಚ್ ತಿಂಗಳ ಮಧ್ಯಭಾಗದಲ್ಲೇ ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಹೊರಹೋಗಲು ಸಾಧ್ಯವಾಗದಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಇನ್ನು ಏಪ್ರಿಲ್, ಮೇ ತಿಂಗಳಾಂತ್ಯದ ಹೊತ್ತಿಗೆ ತಾಪಮಾನವನ್ನು ಊಹಿಸುವುದು ಕಷ್ಟ. ಉದ್ಯೋಗ ವ್ಯವಹಾರಾದಿ ವಿವಿಧ ಕಾರಣಗಳಿಗೆ ಮನೆಯಿಂದ ಹೊರಹೋಗದಿರಲು ಸಾಧ್ಯವಿಲ್ಲ. ಒಂದು ವೇಳೆ ಮನೆಯಲ್ಲೇ ಉಳಿದರೆ ಮನೆಯೊಳಗೂ ಕೂಡಾ ಆ ತಾಪದ ಜಳ ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯ ತಾರಸಿ ಮೇಲೆ ಶೀಟ್ ಅಳವಡಿಸುವುದು ಕೊಂಚ ಮಟ್ಟಿನ ಪರಿಹಾರ ಒದಗಿಸಲಿದೆ.

ಬಹುಪಯೋಗಿ ಶೀಟ್ ಅಳವಡಿಕೆ

ಮನೆಯ ತಾರಸಿ ಮೇಲೆ ಶೀಟ್ ಹಾಕಿಸುವುದರಿಂದ ವಿವಿಧ ಉಪಯೋಗಗಳಿದ್ದು, ಬೇಸಿಗೆಯಲ್ಲಿ ಮನೆಯ ತಾಪವನ್ನು ತಗ್ಗಿಸಲು ಸಹಕಾರಿಯಾಗುವುದರ ಜೊತೆಗೆ ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯನ್ನು ನಿಯಂತ್ರಿಸುತ್ತದೆ. ಹೊಸ ಮನೆಗಳಲ್ಲಿ ಮಳೆನೀರು ಸೋರಿಕೆ ಪ್ರಮಾಣ ಕಡಿಮೆ ಇದ್ದರೂ ಹಳೆಯ ಮನೆಗಳಲ್ಲಿ ಮಳೆನೀರು ಜಿನುಗುವುದು ಸಾಮಾನ್ಯ. ಆ ಸಮಸ್ಯೆಗೆ ಕೂಡಾ ತಾರಸಿ ಮೇಲೆ ಶೀಟ್ ಅಳವಡಿಸುವುದು ಉತ್ತಮ ಪರಿಹಾರ. ಈ ಎರಡು ಪ್ರಮುಖ ಉಪಯೋಗಗಳ ಜೊತೆಗೆ ಕಟ್ಟಡದ ಬಾಳಿಕೆ ಕೂಡಾ ಹೆಚ್ಚಾಗುತ್ತದೆ. ಹಾಗೂ ಮನೆಯ ತಾರಸಿ ಮೇಲೆ ತಡೆಗೋಡೆ ಇದ್ದಲ್ಲಿ ಮೇಲೆ ಹಾಕಿಸುವ ಶೀಟ್‌ನಿಂದಾಗಿ ಒಟ್ಟಾರೆ ತಾರಸಿ ಒಂದು ಪುಟ್ಟ ಸಭಾಂಗಣವಾಗಿ ಮಾರ್ಪಾಡಾಗಲಿದೆ. ಮನೆಯಲ್ಲಿ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಇದು ಸಹಕಾರಿಯಾಗಲಿದೆ.

ಮನೆಯ ಅಂದಕ್ಕೆ ತಕ್ಕ ಶೀಟ್‌ಗಳು ಲಭ್ಯ

ಬಿಸಿಲು, ಮಳೆಯಿಂದ ಕಟ್ಟಡದ ರಕ್ಷಣೆ ಹಾಗೂ ಮನೆಯೊಳಗಿನ ತಾಪಮಾನ ನಿಯಂತ್ರಣಕ್ಕೆ ಸಹಕಾರಿಯಾಗಿ ತಾರಸಿ ಮನೆ ಮೇಲೆ ಅಳವಡಿಸುವ ಶೀಟ್‌ಗಳಲ್ಲೂ ವೆರೈಟಿ ಡಿಸೈನ್ ಮತ್ತು ವೆರೈಟಿ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆಯ ಗೋಡೆಗೆ ಬಳಿಯುವ ಬಣ್ಣಕ್ಕೆ ಸರಿ ಹೊಂದುವಂತೆ, ಅಂದವನ್ನು ಹೆಚ್ಚಿಸುವ ವಿನ್ಯಾಸ ಮತ್ತು ಬಣ್ಣದ ಶೀಟ್‌ಗಳನ್ನು ಅಳವಡಿಸಬಹುದು. ಕುಂಡಗಳಲ್ಲಿ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಲು ಬಿಸಿಲಿನ ಸಮಸ್ಯೆ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net