ಶೀಲ ಶಂಕಿಸಿದ ಕಾನ್‌ಸ್ಟೆಬಲ್‌ಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ

PC (2)
Published on

ಬೆಂಗಳೂರು: ಕಾನ್‌ಸ್ಟೆಬಲ್ ಮೇಲೆ ಪೆಟ್ರೋಲ್ ಸುರಿದು ಪ್ರೇಯಸಿ ಹತ್ಯೆ ಮಾಡಿದ್ದಾಳೆ.

ಬಸವನಗುಡಿ ಠಾಣೆ ಕಾನ್‌ಸ್ಟೆಬಲ್ ಸಂಜಯ್ (30) ಮೃತ ಪೊಲೀಸ್. ಕೊಲೆ ಮಾಡಿದ ಸಂಬಂಧ ಹೋಂಗಾರ್ಡ್ ರಾಣಿ ಎಂಬಾಕೆಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ರಾಹುಲ್ ಕುಮಾರ್ ಶಹಪುರ್‌ವಾದ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಚನ್ನರಾಯಪಟ್ಟಣಮೂಲದ ಸಂಜಯ್, 2018ರಲ್ಲಿ ಕಾನ್‌ಸ್ಟೆಬಲ್‌ಯಾಗಿ ಪೊಲೀಸ್ ಇಲಾಖೆಗೆ ಸೇರಿ ಬಸವನಗುಡಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 3 ತಿಂಗಳಿಂದ ವಿಶೇಷ ಕರ್ತವ್ಯದ ಮೇಲೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಕೆಲಸ ಮಾಡುತ್ತಿದ್ದರು. ಹನುಮಂತನಗರದಲ್ಲಿ ಒಂಟಿಯಾಗಿ ನೆಲೆಸಿದ್ದರು.

ಮಂಡ್ಯ ಮೂಲದ ರಾಣಿ, ಮದುವೆ ಆಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಅಷ್ಟಲಕ್ಷ್ಮೀ ಲೇಔಟ್‌ನಲ್ಲಿ ಕುಟುಂಬದ ಜತೆಗೆ ನೆಲೆಸಿದ್ದು, ಎಸ್‌ಐಎಸ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಳು. ಇದಕ್ಕೂ ಮೊದಲು 2020-21ನೇ ಸಾಲಿನಲ್ಲಿ ರಾಣಿ, ಹೋಂಗಾರ್ಡ್ ಆಗಿ ಕೆಲಸಕ್ಕೆಂದು ಬಸವನಗುಡಿ ಠಾಣೆಗೆ ಸೇರಿದ್ದಳು. ಈ ವೇಳೆ ಸಂಜಯ್‌ಗೂ ಮತ್ತು ರಾಣಿಗೂ ಪರಿಚಯವಾಗಿ ಸಲುಗೆ ಬೆಳೆದಿತ್ತು.

ಡಿಸೆಂಬರ್ 6ರ ಬೆಳಗ್ಗೆ ಎ ಪಾಳಿ ಕರ್ತವ್ಯ ಮುಗಿಸಿಕೊಂಡು ಸಂಜೆ 6 ಗಂಟೆಗೆ ಸಂಜಯ್ ಮನೆಗೆ ಬಂದಿದ್ದರು. ಈ ವೇಳೆ ೆನ್ ಮಾಡಿದ ರಾಣಿ, ಪತಿ, ಮಕ್ಕಳು ಯಾರು ಇಲ್ಲ. ಮನೆಗೆ ಬರುವಂತೆ ಕರೆದಿದ್ದಳು. ಮನೆಗೆ ಹೋದ ಸಂಜಯ್, ಆಕೆಯೊಂದಿಗೆ ಏಕಾಂತ ಕ್ಷಣಗಳನ್ನು ಕಳೆದಿದ್ದನು. ಇದರ ನಡುವೆ ಎಂ.ಆರ್. ಚೇತನ್ ಎಂಬಾತ ರಾಣಿ ಮೊಬೈಲ್‌ಗೆ ಕರೆ ಮಾಡಿದ್ದನು. ಅನುಮಾನ ಬಂದು ಸಂಜಯ್, ಆತನ ಬಗ್ಗೆ ವಿಚಾರಿಸಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ರಾಣಿ ಮೊಬೈಲ್‌ನ್ನು ಪರಿಶೀಲನೆ ನಡೆಸಿದಾಗ ಚೇತನ್ ಜೊತೆಗೆ ಸಲುಗೆಯಿಂದ ಮಾತನಾಡಿರುವುದು ಬೆಳಕಿಗೆ ಬಂದಿದೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಇದರಿಂದ ಕುಪಿತಗೊಂಡ ರಾಣಿ, ನಿನ್ನ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು. ಕೆರಳಿದ ಸಂಜಯ್, ಸಮೀಪದ ಬಂಕ್‌ಗೆ ಹೋಗಿ ಪೆಟ್ರೋಲ್ ತಂದು ಠಾಣೆಗೆ ಕೊಟ್ಟು ಸುರಿಯುತ್ತೀಯ ಸುರಿ ನೋಡಣ ಎಂದು ಗದರಿದ್ದಾನೆ. ರಾಣಿ ಪೆಟ್ರೋಲ್ ತೆಗೆದುಕೊಂಡು ಹೊಟ್ಟೆ ಮತ್ತು ಬೆನ್ನಿಗೆ ಎರಚಿ ಬೆಂಕಿ ಹಚ್ಚಿದ್ದಾಳೆ. ಕೊನೆಗೆ ಆಕೆಯೇ ಸಂಜಯ್‌ನನ್ನು ರಕ್ಷಣೆ ಮಾಡಿ ಬೈಕ್‌ನಲ್ಲಿ ಆಸ್ಪತ್ರೆಗೆ ತಂದು ಸೇರಿದ್ದಳು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜಯ್ ಚಿಕಿತ್ಸೆ ಲಿಸದೆ ಅಸುನೀಗಿದ್ದಾನೆ ಎಂದು ಡಿಸಿಪಿ ರಾಹುಲ್‌ಕುಮಾರ್ ಶಹಪುರ್ ವಾದ್ ತಿಳಿಸಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಅನಾಹುತ ಎಂದಿದ್ದ :

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಕಾನ್‌ಸ್ಟೆಬಲ್ ಸಂಜಯ್, ಕುರಿದು ವೈದ್ಯರು ವಿ.ವಿ.ಪುರ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಆಸ್ಪತ್ರೆಗೆ ಹೋಗಿ ಹೇಳಿಕೆ ಪಡೆದಾಗ ತನ್ನ ಮನೆಯಲ್ಲಿ ಅಡುಗೆ ಮಾಡುವಾಗ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿಕೆ ಕೊಟ್ಟಿದ್ದರು. ಇದಾದ ಮೇಲೆ ಮತ್ತೆ ಡಿ.19ಕ್ಕೆ ಸಂಜಯ್, ಮರು ಹೇಳಿಕೆ ಕೊಟ್ಟಿದ್ದು, ಅದರಲ್ಲಿ ರಾಣಿ ಮನೆಯಲ್ಲಿ ನಡೆದ ಘಟನೆ ಕುರಿತು ದೂರು ನೀಡಿದ್ದಾರೆ. ಈ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ಆರಂಭದಲ್ಲಿ ಒಂದು ಹೇಳಿಕೆ ಕೊಟ್ಟಿದ್ದು, ಆನಂತರ ಒಂದು ಹೇಳಿಕೆ ನೀಡಿದ್ದಾರೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡು ವೈಜ್ಞಾನಿಕವಾಗಿ ತನಿಖೆ ನಡೆಸಲಾಗುತ್ತಿದೆ.

ರಾಹುಲ್ ಕುಮಾರ್ ಶಹಪುರ್ ವಾದ್-ದಕ್ಷಿಣ ವಿಭಾಗ ಡಿಸಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net