

ಮುಂಬೈ: ಬಾಲಿವುಡ್ ನಟ ಶತ್ರುಘ್ನ ಸಿನ್ಹಾ(Shatrughan Sinha) ಅವರು ವೈಯಕ್ತಿಕ ಜೀವನ, ಹಳೆಯ ದಿನಗಳು ಹಾಗೂ ತಮ್ಮ ಪ್ರೀತಿಯ ಮಡದಿ ಪೂನಂ ಸಿನ್ಹಾ ಅವರನ್ನು ಮೊದಲು ಭೇಟಿಯಾಗಿದ್ದು ಹೀಗೆ ಅವರ ಜೀವನದ ಮುಖ್ಯ ಸಂಗತಿಗಳನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಕಪಿಲ್ ಶರ್ಮಾ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಶತ್ರುಘ್ನ ಸಿನ್ಹಾ ಕುಟುಂಬ ಸಮೇತ ಭಾಗಿಯಾಗಿದ್ದರು. ಪತ್ನಿ ಪೂನಂ, ಪುತ್ರಿ ಸೋನಾಕ್ಷಿ ಸಿನ್ಹಾ ಹಾಗೂ ಅಳಿಯ ಜಹೀರ್ ಇಕ್ಬಾಲ್ ಅವರೊಂದಿಗೆ ಬಂದಿದ್ದರು. ಕಾರ್ಯಕ್ರಮವೊಂದರಲ್ಲಿ ಇಡೀ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ. ಕುಟಂಬಸ್ಥರ ಎದುರಿಗೆ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಬಹುಮುಖ್ಯ ವಿಚಾರಗಳನ್ನು ಶತ್ರುಘ್ನ ಸಿನ್ಹಾ ಹಂಚಿಕೊಂಡಿದ್ದಾರೆ.
ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ ಶತ್ರುಘ್ನ ಸಿನ್ಹಾ, ಪಾಟ್ನಾದಲ್ಲಿದ್ದ ಕಾಲೇಜಿಗೆ ತಾನು ಆಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಹೇಳಿದ್ದಾರೆ. ಅದೇ ರೈಲಿನಲ್ಲಿ ಪೂನಂ ಸಿನ್ಹಾ ಅವರನ್ನು ಮೊದಲು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನನ್ನ ವಿಚಿತ್ರ ವರ್ತನೆಗೆ ನನ್ನ ಕುಟುಂಬದ ಸದಸ್ಯರು ಗದರಿಸಿದ್ದರಿಂದ ನಾನು ತುಂಬಾ ಭಾವುಕನಾಗಿದ್ದೆ, ಇದರ ನಡುವೆ ರೈಲಿನಲ್ಲಿ ಅಳುತ್ತಿದ್ದ ಪೂನಂ ಕಡೆಗೆ ನನ್ನ ಗಮನ ಹೋಗಿತ್ತು. ನಾನು ಅವಳನ್ನು ಮೊದಲು ನೋಡಿದಾಗ ಅವಳು ಅಳುತ್ತಿದ್ದಾಳೆ ಎಂದು ಭಾವಿಸಿದ್ದೆ. ಅವಳ ತಾಯಿ ಆಕೆಯನ್ನು ಏನೋ ಗದರಿಸಿದ್ದಾಳೆ ಎಂದು ನಾನು ಊಹಿಸಿದೆ. ಇದು ನನ್ನ ಮತ್ತು ಪೂನಂ ಮೊದಲ ಭೇಟಿಯ ನೆನಪು ಎಂದು ಹೇಳಿದ್ದಾರೆ.
ಪೂನಂ ಅವರನ್ನು 14 ವರ್ಷಗಳ ಕಾಲ ಪ್ರೀತಿಸಿ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿ. ಹಾಗೂ ದಂಪತಿಯಾದ ಬಳಿಕ ಎದುರಿಸಿದ ಸಮಸ್ಯೆಗಳ ಬಗ್ಗೆಯೂ ಶತ್ರುಘ್ನ ಸಿನ್ಹಾ ಮಾತನಾಡಿದ್ದಾರೆ. ಅಲ್ಲದೆ ಅವರಿಗೆ ಕಾಡಿದ ಒಂದು ವಿಚಾರವನ್ನು ವಿವರಿಸಿದರು. ಪೂನಂ ತನ್ನ ವೈವಾಹಿಕ ಜೀವನದಲ್ಲಿ 7.5 ವರ್ಷಗಳ ಕಾಲ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪಂಡಿತರೊಬ್ಬರು ಭವಿಷ್ಯ ನುಡಿದಿದ್ದರು. ಹೀಗಿರುವಾಗ ತನ್ನ ಹಿಂದಿನ ಸಂಬಂಧಗಳ ಬಗ್ಗೆ ವದಂತಿಗಳು ಹರಿದಾಡಿದಾಗ ಪೂನಂ ಜೀವನದಲ್ಲೂ ಆ ಭಾವನಾತ್ಮಕ ಕ್ಷಣಗಳು ಬಂದವು. ಆದರೆ ಪ್ರೀತಿ ಮತ್ತು ಪರಸ್ಪರ ತಿಳುವಳಿಕೆ ನಮ್ಮಿಬ್ಬರ ಸಂಬಂಧವನ್ನು ಗಟ್ಟಿಗೊಳಿಸಿತು ಎಂದು ಹೇಳಿದ್ದಾರೆ.
ಶತ್ರುಘ್ನ ಸಿನ್ಹಾ ಅವರ ಮಗಳು ಸೋನಾಕ್ಷಿ ಸಿನ್ಹಾ ಜೂನ್ 23ರಂದು ಜಹೀರ್ ಇಕ್ಬಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೆ ಇದೆ. ಈ ನಡುವೆ ಮಗಳು ಮತ್ತು ತಂದೆಯ ನಡುವೆ ಏನು ಸರಿಯಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೆಲಕಾಲ ಹರಿದಾಡಿತ್ತು. ಆದರೀಗೆ ಕುಟುಂಬಸ್ಥರೊಂದಿಗೆ ಕಾರ್ಯಕ್ರಮದಲ್ಲಿ ಶತ್ರುಘ್ನ ಸಿನ್ಹಾ ಭಾಗಿಯಾಗಿರುವುದು ಇಂತಹಾ ಊಹಾಪೋಹಗಳಿಗೆ ಪೂರ್ಣವಿರಾಮ ಇಟಂತಾಗಿದೆ. (ಏಜೆನ್ಸೀಸ್)