

ಬೆಂಗಳೂರು: ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮುನ್ನ 'ಸೀತಾಯಣ' ಎಂಬ ಚಿತ್ರದಲ್ಲಿ ನಟಿಸಿದ್ದ ಅವರು, ಇದೀಗ 'ಸಮಿತ್' ಎಂಬ ಇನ್ನೊಂದು ಚಿತ್ರದಲ್ಲಿ ಹೀರೋ ಆಗಿದ್ದಾರೆ.
ಇದನ್ನೂ ಓದಿ: ಹಾಫ್ ಸೆಂಚ್ಯುರಿ ಬಾರಿಸಿದ ‘5 ಅಡಿ 7 ಅಂಗುಲ’
'ಸೀತಾಯಣ' ಚಿತ್ರವು ಕನ್ನಡದಲ್ಲಿ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡಗುಡೆಯಾಗುತ್ತಿದೆ. ಈಗ 'ಸಮಿತ್' ಚಿತ್ರವು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತಯಾರಾಗಿ, ಮಲಯಾಳಂಗೆ ಡಬ್ ಆಗಿ ಬಿಡುಗಡೆಯಾಗಲಿದೆ.
ಸತೀಶ್ ಮಲೆಂಪಾಟಿ ಎನ್ನುವವರು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನೈಜ ಘಟನೆಯೊಂದನ್ನು ಆಧರಿಸಿದ ಈ ಚಿತ್ರ ತಯಾರಾಗುತ್ತಿದೆ. ಸದ್ಯಕ್ಕೆ ಆ ಸತ್ಯ ಘಟನೆ ಯಾವುದು, ಎಲ್ಲಿ ನಡೆಯಿತು ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ. ಆದರೆ, ಚಿತ್ರತಂಡದವರು ಬಹುತೇಕ ಆಂಧ್ರದವರಾದ್ದರಿಂದ, ಈ ಘಟನೆ ಆಂಧ್ರದಲ್ಲೇ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಅಕ್ಷಿತ್ಗೆ ನಾಯಕಿಯರಾಗಿ ಚಾಂದಿನಿ ಮತ್ತು ಅನುವರ್ಣ ನಟಿಸುತ್ತಿದ್ದು, ಮಿಕ್ಕಂತೆ ಉಳಿದ ಪಾತ್ರವರ್ಗದವರ ಆಯ್ಕೆ ನಡೆಯುತ್ತಿದೆ. ಸತೀಶ್ ಮುತ್ಯಾಲ ಅವರ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಮೇನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಬೆಂಗಳೂರು, ಹೈದರಾಬಾದ್, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.