ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?

Kajal
Published on

ಹೈದರಾಬಾದ್​: ಟಾಲಿವುಡ್​ ಬೆಡಗಿ ಕಾಜಲ್​ ಅಗರವಾಲ್ ಇತ್ತೀಚೆಗಷ್ಟೇ ಮದುವೆಯಾಗಿ ಮಾಲ್ಡೀವ್ಸ್​ನಲ್ಲಿ ಹನಿಮೂನ್​ ಮುಗಿಸಿಕೊಂಡು ತವರಿಗೆ ಮರಳಿದ್ದಾರೆ. ಹತ್ತು ದಿನಗಳ ಕಾಲ ಮಾಲ್ಡೀವ್ಸ್​ನಲ್ಲಿ ಬೀಡುಬಿಟ್ಟಿದ್ದ ಕಾಜಲ್​ ದಂಪತಿ ಹನಿಮೂನ್​ಗೆ ಖರ್ಚು ಮಾಡಿರುವ ಹಣವೆಷ್ಟು ಎಂಬ ವಿಚಾರ ಟಾಲಿವುಡ್​ ಅಂಗಳದಲ್ಲಿ ಚರ್ಚೆಯಾಗಿದೆ. ಐಷಾರಾಮಿ ವಿಲ್ಲಾಗಳನ್ನೇ ಬುಕ್​ ಮಾಡಿರುವಾಗ ಖರ್ಚಿನ ಬಗ್ಗೆ ಸಹಜವಾಗೇ ಕುತೂಹಲ ಮೂಡುತ್ತದೆ.

ಹನಿಮೂನ್​ ಖರ್ಚಿನ ಸಂಬಂಧ ಸಾಕಷ್ಟು ಸುದ್ದಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ಕಾಜಲ್​ ಒಂದು ರೂಪಾಯಿ ಖರ್ಚಿಲ್ಲದೆ ಹನಿಮೂನ್​ ಪ್ರವಾಸ ಮುಗಿಸಿ ಬಂದಿದ್ದಾರೆ ಅಂದರೆ ಅಚ್ಚರಿಯಾಗದೇ ಇರದು. ​

ಅಂದಹಾಗೆ ಕಾಜಲ್​, ಮುಂಬೈ ಮೂಲದ ಉದ್ಯಮಿ ಗೌತಮ್​ ಕಿಚ್ಲುರನ್ನು ಅಕ್ಟೋಬರ್​ 30ರಂದು ಮುಂಬೈನಲ್ಲಿ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ಮಾಲ್ಡೀವ್ಸ್​ಗೆ ಹನಿಮೂನ್​ ಪ್ರವಾಸಕ್ಕೆ ಹೋದರು. ಸಾಮಾನ್ಯವಾಗಿ ಅವರ ಹನಿಮೂನ್​ ಖರ್ಚು ನೋಡುವುದಾದರೆ, ಒಂದು ರಾತ್ರಿಗೆ ಮುರಾಕ ಹೋಟೆಲ್​ಗೆ 50 ಸಾವಿರ ಡಾಲರ್ ಅಂದರೆ​ ಭಾರತೀಯ ಕರೆನ್ಸಿ ಪ್ರಕಾರ 38 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಯಾವುದೇ ಖರ್ಚಿಲ್ಲದೆ ಕಾಜಲ್​ ದಂಪತಿ ಹನಿಮೂನ್ ಪ್ರವಾಸ​ ಮುಗಿಸಿದ್ದು ಹೇಗೆ?

ಬಾಲಿವುಡ್​ ಮಾಧ್ಯಮಗಳ ಪ್ರಕಾರ ಕಾಜಲ್​ ಅಗರವಾಲ್​ 10 ದಿನಗಳ ಕಾಲ ಹೋಟೆಲ್​ನಲ್ಲಿ ತಂಗಿದ್ದರಂತೆ. ಹೋಟೆಲ್​ ಬಾಡಿಗೆ ಸೇರಿದಂತೆ ಆಹಾರ ಮತ್ತು ದೃಶ್ಯವೀಕ್ಷಣೆಯ ವೆಚ್ಚ ಬರೋಬ್ಬರಿ 5 ಕೋಟಿ ರೂ. ಆಗುತ್ತದೆ. ಕಾಜಲ್​ ಮತ್ತು ಗೌತಮ್​ ಇಬ್ಬರು ಶ್ರೀಮಂತರಾಗಿರುವುದರಿಂದ ಇದೇನು ದೊಡ್ಡ ಮೊತ್ತವೇನಲ್ಲ. ಆದರೆ, ಹನಿಮೂನ್​ನಲ್ಲಿ ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ಎಲ್ಲವೂ ಸಹ ಉಚಿತವಾಗಿಯೇ ದಂಪತಿಗೆ ದೊರಕಿದೆ ಎಂದು ತಿಳಿದುಬಂದಿದೆ.

ಉಚಿತವಾಗಿ ಹೇಗೆ ದೊರಕಿತು ಎಂಬ ವಿಚಾರಕ್ಕೆ ಬರುವುದಾದರೆ, ಮಾಲ್ಡೀವಿಯನ್​ ಸರ್ಕಾರ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸೆಲೆಬ್ರಿಟಿಗಳಿಗಾಗಿಯೇ ಉಚಿತ ಆಫರ್​ ಘೋಷಣೆ ಮಾಡಿದೆಯಂತೆ. ಇನ್​​ಸ್ಟಾಗ್ರಾಂನಲ್ಲಿ ಯಾರೂ ಎರಡು ಮಿಲಿಯನ್​ಗಿಂತ ಹೆಚ್ಚು ಫಾಲೋವರ್ಸ್​ ಹೊಂದಿರುವರೋ ಅಂತಹ ಸೆಲೆಬ್ರಿಟಿಗಳು ಈ ಆಫರ್​ಗೆ ಅರ್ಹರಂತೆ. ಇನ್ನು ಕಾಜಲ್​ ಅವರಿಗೆ 16 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಹೀಗಾಗಿಯೇ ಕಾಜಲ್​ ದಂಪತಿಗೆ ಉಚಿತ ಹನಿಮೂನ್​ ಪ್ರವಾಸ ದೊರಕಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net