

ಬೆಂಗಳೂರು: ‘ಇಂದು ನಾನು ಮಾಧ್ಯಮದವರ ಜತೆಗೆ ಕುಳಿತು ಮಾತಾಡುತ್ತಿದ್ದೇನೆ ಮತ್ತು ನನ್ನ ಬಗ್ಗೆ ಸಿನಿಮಾ ಬರುತ್ತದೆ ಎಂದರೆ ಅದಕ್ಕೆ ಕಾರಣವೇ ಆ ಸಿನಿಮಾಗಳು. ಹಾಗಾಗಿ ಚಿತ್ರಗಳ ಬಗ್ಗೆ ಯಾವತ್ತೂ ಬೇಸರವಿಲ್ಲ, ಬದಲಿಗೆ ಬಹಳ ಖುಷಿ ಇದೆ ...’ ಎಂದು ಹೇಳಿಕೊಂಡರು ಶಕೀಲಾ. ಅವರ ಮಾತುಗಳಲ್ಲಿ ಖುಷಿ ಕಾಣುತ್ತಿತ್ತು. ಹೆಮ್ಮೆ ಇಣುಕುತ್ತಿತ್ತು. ಆದರೂ ಒಂದು ಸಣ್ಣ ಬೇಸರ ಅವರಲ್ಲಿತ್ತು.
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ‘ಶಕೀಲಾ’ ಬಯೋಪಿಕ್ ನಿರ್ವಣವಾಗಿ, ಇದೇ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಭಾನುವಾರ ರಾತ್ರಿ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಕುಟುಂಬದವರ್ಯಾರೂ ಇಲ್ಲ ಎಂಬ ಬೇಸರ ಅವರಿಗಿತ್ತು. ಅದನ್ನು ಯಾವ ಮುಚ್ಚುಮರೆ ಇಲ್ಲದೆಯೇ ಹೇಳಿಕೊಂಡರು.
‘ಇಂದು ನನ್ನ ಬದುಕಿನ ಬಹಳ ಮುಖ್ಯ ಘಟ್ಟ. ಆದರೆ, ಹಂಚಿಕೊಳ್ಳುವುದಕ್ಕೆ ಯಾರೂ ಇಲ್ಲ. ಕೆಲವರು ಇಂದು ಬದುಕಿಲ್ಲ. ಇನ್ನು ಬದುಕಿರುವವರಲ್ಲೂ ಯಾರೂ ನನ್ನ ಜತೆಗಿಲ್ಲ. ನನ್ನ ಅಕ್ಕ, ನನ್ನ ದುಡ್ಡು ತೆಗೆದುಕೊಂಡು ಹೋದಳು. ಅವಳ ಜತೆಗೆ ನಾನು ಮಾತು ಬಿಟ್ಟು ಹಲವು ವರ್ಷಗಳಾದವು. ಇನ್ನು ಒಬ್ಬ ಸಹೋದರ ಇದ್ದಾನೆ. ನನ್ನ ಬಗ್ಗೆ ಚಿತ್ರ ಆಗುತ್ತಿರುವುದು ಗೊತ್ತಿದೆ. ಸ್ಟಾರ್ ತಮಿಳು ಚಾನಲ್ನಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಡುವುದೂ ಅವನಿಗೆ ಗೊತ್ತಿದೆ. ಫೋನ್ ಮಾಡಿ ವಿಶ್ ಮಾಡುವ ಸೌಜನ್ಯ ಕೂಡ ಇಲ್ಲ. ಅವನ ಕುಟುಂಬಕ್ಕೆ ಎಷ್ಟೆಲ್ಲ ಸಹಾಯ ಮಾಡಿದೆ. ಆದರೆ, ಇಂದು ಯಾರೂ ಜತೆಗಿಲ್ಲ’ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ.
ನಾನೀಗ ಒಬ್ಬಂಟಿ: ಶಕೀಲಾ ಯಾರ ಮೇಲೂ ಅವಲಂಬಿತರಾಗಿಲ್ಲವಂತೆ. ಚೆನ್ನೈನಲ್ಲಿ ಒಬ್ಬರೇ ಸ್ವತಂತ್ರವಾಗಿದ್ದಾರಂತೆ. ‘ಹತ್ತನೇ ತರಗತಿ ಫೇಲ್ ಆದಾಗಿನಿಂದ ದುಡಿಯಲು ಪ್ರಾರಂಭಿಸಿದವಳು ನಾನು. ಆ ನಂತರ ಯಾರಿಂದಲೂ ಸಹಾಯ ಕೇಳಿಲ್ಲ, ಯಾರಿಗೂ ಮೋಸ ಮಾಡಿಲ್ಲ. ಆದರೆ, ನನಗೆ ಸಾಕಷ್ಟು ಮೋಸವಾಗಿದೆ. ಅಷ್ಟೆಲ್ಲ ದುಡಿದರೂ ನನ್ನ ಬಳಿ ದೊಡ್ಡ ಬಂಗಲೆಯೇನೂ ಇಲ್ಲ. ಮನೆಯಲ್ಲಿ ಒಬ್ಬಳೇ ಇದ್ದೇನೆ. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ಆ ಮನೆಯಲ್ಲಿ ನಾನೇ ರಾಜ, ನಾನೇ ರಾಣಿ, ನಾನೇ ಮಂತ್ರಿ. ಯಾರು ಜತೆಗಿಲ್ಲದಿದ್ದರೂ, ದೇವರು ನನ್ನ ಜತೆಗಿದ್ದಾನೆ. ನಾನು ಆ ದೇವರ ಮಗಳು. ಆತ ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ತುಂಬುವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಶಕೀಲಾ.
ಆತ್ಮಗೌರವಕ್ಕಾಗಿ ಬಿಟ್ಟೆ: ಇನ್ನು ಶಕೀಲಾ ಒಂದು ಕಾಲಕ್ಕೆ ಸಾಕಷ್ಟು ‘ಎ’ ಸಿನಿಮಾಗಳಲ್ಲಿ ನಟಿಸಿದರು. ಅದೊಂದು ದಿನ ಅವೆಲ್ಲವನ್ನೂ ಬಿಟ್ಟು ಹೊರಗೆ ಬಂದರು. ‘ನನ್ನ ಚಿತ್ರಗಳು ಬಿಡುಗಡೆಯಾಗದಂತೆ ಸಾಕಷ್ಟು ಪ್ರಯತ್ನಗಳಾದವು. ನನ್ನ ಅಭಿನಯದ 40 ಚಿತ್ರಗಳಿಗೆ ಸೆನ್ಸಾರ್ ಸಮಸ್ಯೆಯಾಯಿತು. ಅದರಿಂದ ನಿರ್ವಪಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು. ಎಲ್ಲಿಂದಲೋ ದುಡ್ಡು ತಂದು ಸಿನಿಮಾ ನಿರ್ವಿುಸಿದವರು ಹೀಗೆ ಕಷ್ಟಗಳನ್ನು ಎದುರಿಸುವುದನ್ನು ನೋಡುವುದಕ್ಕೆ ಆಗಲಿಲ್ಲ. ಮುಂದೊಂದು ದಿನ ನನ್ನನ್ನು ಚಿತ್ರರಂಗದಿಂದ ಕಿತ್ತುಹಾಕುವುದಕ್ಕಿಂತ, ನಾನೇ ಹೊರಬರುವುದು ಸೂಕ್ತ ಎಂದೆನಿಸಿತು. ಅದೇ ಕಾರಣಕ್ಕೆ, 23 ಚಿತ್ರಗಳಿಂದ ಹೊರಬಂದು, ಇನ್ನು ಮುಂದೆ ಮಲಯಾಳಂ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದೆ. ನಾನು ಹಾಗೆ ಮಾಡಿದ್ದು, ಆತ್ಮಗೌರವಕ್ಕಾಗಿಯೇ ಹೊರತು ಬೇರೆ ಯಾವ ಕಾರಣಕ್ಕಲ್ಲ’ ಎನ್ನುತ್ತಾರೆ ಶಕೀಲಾ.
ಶಕೀಲಾ ಅವರ ಆತ್ಮಚರಿತ್ರೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆಯಾದರೂ, ಈ ಚಿತ್ರದಲ್ಲಿ ಹಲವು ಅಂಶಗಳನ್ನು ಹೊಸದಾಗಿ ಸೇರಿಸಲಾಗಿದೆಯಂತೆ. ‘ನಾನು ಪುಸ್ತಕ ಬರೆದು 10 ವರ್ಷಗಳು ಕಳೆದಿವೆ. ಅದರ ನಂತರ ಏನೆಲ್ಲ ಆಯಿತು ಎಂಬುದನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ನನ್ನ ಒಪ್ಪಿಗೆಯನ್ನು ಪಡೆದೇ ಈ ಚಿತ್ರ ಮಾಡಲಾಗಿದೆ’ ಎನ್ನುವ ಅವರು, ತಮ್ಮ ಪಾತ್ರ ಮಾಡಿರುವ ರಿಚಾ ಚಡ್ಡಾ ಜತೆಗೆ ಸಾಕಷ್ಟು ಸಮಯ ಕಳೆದಿದ್ದಾರಂತೆ. ಬೋಲ್ಡ್ ದೃಶ್ಯಗಳಲ್ಲಿ ನಾನು ಹೇಗೆ ನಟಿಸುತ್ತಿದ್ದೆ? ಅಂತಾ ದೃಶ್ಯಗಳಲ್ಲಿ ನೀವು ಕುಡಿದು ನಟಿಸುತ್ತಿದ್ದರಾ? ಎಂದು ರಿಚಾ ಕೇಳಿದ್ದರು. ‘ನಾನೆಂದೂ ಕುಡಿದು ನಟಿಸುವುದಿಲ್ಲ. ಕುಡಿದರೆ ಸಾಕಷ್ಟು ಬೇರೆ ಸಮಸ್ಯೆಗಳಾಗುತ್ತವೆ ಎಂಬ ಕಾರಣಕ್ಕೆ ನಾನು ನಟಿಸುವಾಗ ಎಂದೂ ಕುಡಿಯುವುದಿಲ್ಲ’ ಎನ್ನುತ್ತಾರೆ.