

ಬೆಂಗಳೂರು: ತಮ್ಮ ಕಾರು ಅಪಘಾತದ ಕುರಿತಂತೆ ವೈರಲ್ ಆಗಿರುವ ಸುದ್ದಿಯ ಬಗ್ಗೆ ತೀವ್ರ ನೊಂದುಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ, ನಾನು ಯಾವುದೇ ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ. ಔಷಧಿಗಾಗಿ ಮನೆಯಿಂದ ಹೊರ ಬಂದಿದ್ದೆ ಅಷ್ಟೆ’ ಎಂದಿದ್ದಾರೆ.
ಇಡೀ ದೇಶವೇ ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ರಾತ್ರೋರಾತ್ರಿ ಸ್ನೇಹಿತರ ಜತೆ ಜಾಲಿ ರೈಡ್ ಹೋಗಿ ಅಪಘಾತ ಮಾಡಿದ್ದಾರೆ ಎಂದು ದಾಖಲಾಗಿರುವ ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಶರ್ಮಿಳಾ, ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಅವರ ಸಹಾಯ ಕೇಳಿದೆ. ಅವರ ಬಳಿ ಲಾಕ್‍ಡೌನ್ ವೇಳೆ ಓಡಾಡುವ ಪಾಸ್ ಇತ್ತು. ಹೀಗಾಗಿ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡೆ. ಈ ವೇಳೆ ಅಪಘಾತವಾಗಿದೆ. ಡಾನ್ ಕಾರು ಓಡಿಸುತ್ತಿದ್ದ. ನಾನು ಹಿಂಬದಿ ಸೀಟಿನಲ್ಲಿ ಕುಳಿತಿದ್ದೆ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ” ಎಂದು ಹೇಳಿದ್ದಾರೆ.
’ಕರೊನಾ ವೈರಸ್ ಗಂಭೀರತೆ ನನಗೆ ತಿಳಿದಿದೆ. ಆದ್ದರಿಂದ ನಾನು ಮನೆಯಲ್ಲಿಯೇ ಇದ್ದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಆದರೆ ನಡೆದ ಘಟನೆಯನ್ನು ತಿಳಿದುಕೊಳ್ಳದೆ, ಅಪಘಾತದ ಸುದ್ದಿ ಎಲ್ಲೆಡೆ ಸುಳ್ಳು ಸುಳ್ಳಾಗಿ ವೈರಲ್ ಆಗಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಶರ್ಮಿಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅವರಿಗೆ ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ.