ಕೇಂದ್ರದ ಈ ಕಂಪೆನಿ ಷೇರು ವರ್ಷಕ್ಕೇ ದ್ವಿಗುಣ..ಕಳೆದ ವರ್ಷ 186 ರೂ.ಇದ್ದಿದ್ದು ಈಗ 333 ರೂ.ಗೆ ಏರಿಕೆ!

job-powergrid
Published on

ಮುಂಬೈ: ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಷೇರುದಾರರಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಆದಾಯವನ್ನು ನೀಡುತ್ತಿವೆ. ಇಂತಹವುಗಳಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಸಹ ಒಂದು. ಕಳೆದ ಐದು ವರ್ಷಗಳಲ್ಲಿ ಇದರ ಷೇರುಗಳು ಉತ್ತಮ ಲಾಭಾಂಶ ನೀಡಿದೆ.

ಪವರ್ ಗ್ರಿಡ್ ಕಾರ್ಪೊರೇಷನ್ ಐದು ವರ್ಷಗಳಲ್ಲಿ ಶೇ.180ರಷ್ಟು ಲಾಭದೊಂದಿಗೆ ಸ್ಥಿರವಾದ ಆದಾಯವನ್ನು ನೀಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರು ಶೇ.79 ರಷ್ಟು ಲಾಭವನ್ನು ನೀಡಿದೆ. ಕಳೆದ ವರ್ಷ ಆಗಸ್ಟ್ 16 ರಂದು 186 ರೂ.ಇದ್ದ ಷೇರಿನ ಬೆಲೆ ಸದ್ಯ 333 ರೂ.ಗೆ ಏರಿಕೆಯಾಗಿದೆ. ಈ ಕಂಪನಿಯಲ್ಲಿ ಒಂದು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದವರಿಗೆ ಕನಿಷ್ಠ 2 ಲಕ್ಷ ರೂಪಾಯಿ ಸಿಗುತ್ತಿದೆ.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು 1983 ರಲ್ಲಿ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಒಡೆತನದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಬೃಹತ್ ವಿದ್ಯುತ್ ಪ್ರಸರಣ ಕಾರ್ಯಕ್ರಮವನ್ನು ಮುಖ್ಯವಾಗಿ ಈ ನಿಗಮವು ನಡೆಸುತ್ತಿದೆ. ಇದರ ಕೇಂದ್ರ ಕಚೇರಿ ಗುರುಗಾಂವ್​ನಲ್ಲಿದೆ. ದೇಶದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಉತ್ಪಾದಿಸುವ ಶೇಕಡಾ 50 ಕ್ಕಿಂತ ಹೆಚ್ಚು ವಿದ್ಯುತ್ ಕಾರ್ಪೊರೇಷನ್ ನಿರ್ವಹಿಸುವ ನೆಟ್‌ವರ್ಕ್ ಮೂಲಕ ರವಾನೆಯಾಗುತ್ತದೆ.

ಪ್ರಸ್ತುತ ಈ ಕಂಪನಿ 2 ಲಕ್ಷ 50 ಸಾವಿರ ಕೋಟಿ ಆಸ್ತಿ ಹೊಂದಿದೆ. ಅಲ್ಲದೆ ಈ ಕಂಪನಿಯು ಷೇರು ಮಾರುಕಟ್ಟೆಯಲ್ಲಿ 87 ಸಾವಿರದ 145 ಕೋಟಿ ಷೇರುಗಳನ್ನು ಹೊಂದಿದೆ. ಈ ಕಂಪನಿಯಲ್ಲಿ ಸುಮಾರು 25 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net