

ನವದೆಹಲಿ: ದೇಶದಲ್ಲಿ ಯುಪಿಎ ಮೈತ್ರಿಕೂಟ ಕಳಾಹೀನವಾಗಿದ್ದು, ಇಂತಹ ಸಂದರ್ಭದಲ್ಲಿ ಹಿರಿಯ ರಾಜಕಾರಿಣಿ ಹಾಗೂ ಎನ್ಸಿಪಿ ನಾಯಕ ಶರದ್ ಪವಾರ್ ಅವರು ಯುಪಿಎ ನೇತೃತ್ವ ವಹಿಸಿಕೊಂಡರೇ ಚೆನ್ನಾಗಿರುತ್ತೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಕಂಡು ಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಶರದ್ ಪವಾರ್ ಅವರು ಯುಪಿಎ ನೇತೃತ್ವ ವಹಿಸಿಕೊಳ್ಳುವುದನ್ನು ಯಾವುದೇ ಪ್ರಾದೇಶಿಕ ಪಕ್ಷಗಳು ವಿರೋಧಿಸುತ್ತವೆ ಎಂದು ನನಗೆ ಅನಿಸುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಯುಪಿಎ ಮೈತ್ರಿಕೂಟ ನಿಸ್ತೇಜನಗೊಂಡಿರುವುದರಿಂದ ಕಾಂಗ್ರೆಸೇತರ ನಾಯಕರು ಇದರ ನೇತೃತ್ವ ವಹಿಸಿಕೊಳ್ಳುವುದು ಸೂಕ್ತ ಎಂದು ರಾವುತ್ ಹೇಳಿದ್ದಾರೆ. ಆದರೆ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು, ರಾವುತ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ರಾಷ್ಟ್ರಮಟ್ಟದಲ್ಲಿ ಯುಪಿಎ ಜೊತೆ ಶಿವಸೇನೆ ಗುರುತಿಸಿಕೊಂಡಿಲ್ಲ ಎಂದಿದ್ದಾರೆ.