

ಬೆಂಗಳೂರು: ಸುದೀಘ 50 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಎಲ್ಲರನ್ನೂ ಪ್ರೀತಿಸುವ, ಇತರರನ್ನು ಬೆಳೆಸುವ ಔದಾರ್ಯದ ಗುಣ ಹೊಂದಿರುವ ಶಾಮನೂರು ಶಿವಶಂಕರಪ್ಪನವರದು ಸಮಗ್ರ ಭಾರತೀಯತೆಗೆ ತಕ್ಕ ವ್ಯಕ್ತಿತ್ವ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ. ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ನ್ಯಾ.ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವಶ್ರೀ ಪ್ರಶಸ್ತಿ ಪ್ರದಾನ ಮತ್ತು ಸಂಜೆಗೊಂದು ನುಡಿಚಿಂತನ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ತಮ್ಮ ಅವಕಾಶಕ್ಕಾಗಿ ಇತರರ ಕಾಲು ಎಳೆಯುವವರೆ ಹೆಚ್ಚು. ಆದರೆ ತಮಗೆ ದೊರೆಯದ ಅವಕಾಶವನ್ನು ಇತರರಿಗೆ ನೀಡಿ ಅವರ ಗೆಲುವಿಗೆ ಶ್ರಮಿಸುವ ಅಪರೂಪದ ವ್ಯಕ್ತಿತ್ವ ಶಿವಶಂಕರಪ್ಪನವರದು. ಹಿಂದೊಮ್ಮೆ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ತಮಗೆ ತಪ್ಪಿದ ಲೋಕಸಭಾ ಟಿಕೆಟ್ನ್ನು ಎಸ್.ಸಿ. ಸಮುದಾಯಕ್ಕೆ ಸೇರಿದ ಕೆ.ಎಚ್.ರಂಗನಾಥ ಅವರಿಗೆ ಕೊಡಿಸಿ ಜನರಲ್ ಕ್ಷೇತ್ರದಿಂದ ಗೆಲ್ಲಿಸಿದ್ದರು. ಶಂಕರಪ್ಪನವರು ಶಿಕ್ಷಣ, ರಾಜಕೀಯ, ಸಮಾಜ ಸೇವೆಯಲ್ಲಿ ಇತರರಿಗೆ ಸರಿಸಾಟಿ ಇಲ್ಲದಷ್ಟು ಕೊಡುಗೆ ನೀಡಿದ್ದಾರೆ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ಉಚಿತ ಮೆಡಿಕಲ್ ಸೀಟು ನೀಡಿ ಸಹಾಯ ಮಾಡಿದ್ದಾರೆ. ಇಂತಹ ಘನ ವ್ಯಕ್ತಿಗೆ ಪ್ರಶಸ್ತಿ ನೀಡಿದ್ದು ಸ್ತುತ್ಯಾರ್ಹ ಕಾರ್ಯ ಎಂದು ಖರ್ಗೆ ಪ್ರಶಂಸಿಸಿದರು. ಸಮಾರಂಭದಲ್ಲಿ ನ್ಯಾ.ಶಿವರಾಜ ವಿ.ಪಾಟೀಲ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಂ.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನ್ಯಾ. ಶಿವರಾಜ ಪಾಟೀಲರ ಸಂಜೆಗೊಂದು ನುಡಿಚಿಂತನ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,ಯಾವುದೇ ಬೆಂಬಲವಿಲ್ಲದೆ ಸ್ವಂತ ಬಲದಲ್ಲಿ ಅತ್ಯುನ್ನತ ಸ್ಥಾನವನ್ನು ಏರಿದ ಅಪರೂಪದ ವ್ಯಕ್ತಿ ಶಿವರಾಜ ಪಾಟೀಲ್. ಪಾಟೀಲರು ಎಂದೂ ಕೋಪಿಸಿಕೊಂಡಿದ್ದನ್ನು ನಾನು ನೋಡಿಲ್ಲ. ಅವರಲ್ಲಿರುವ ಒಳ್ಳೆಯ ಗುಣಕ್ಕೆ ಎಲ್ಲವೂ ಒಳ್ಳೆಯದೆ ಆಗಿದೆ. ನಾನು ಕೂಡಾ ಎಲ್ಎಲ್ಬಿ ಮುಗಿದ ನಂತರ ಎರಡು ವರ್ಷ ಅವರ ಆಫೀಸಿನಲ್ಲಿ ಜೂನಿಯರ್ ಆಗಿ ವಕೀಲಿ ಪ್ರಾಕ್ಟೀಸ್ ಮಾಡಿದ್ದೆ ಎಂದು ಖರ್ಗೆ ನೆನಪಿಸಿಕೊಂಡರು.