

ಊಖಿಮಠ : ಉತ್ತರಾಖಂಡದ ಚಾರ್ಧಾಮ ಯಾತ್ರೆಗಳಲ್ಲಿ ಪ್ರಸಿದ್ಧವಾಗಿರುವ ಕೇದಾರನಾಥ ಮಂದಿರವು ಮೇ.2ರಂದು ಬೆಳಗ್ಗೆ 7 ಗಂಟೆಗೆ ಬಾಗಿಲು ತೆರೆಯಲಿದೆ ಎಂದು ಕೇದಾರನಾಥ ರಾವಲ್ ಜಗದ್ಗುರು ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಕಳೆದ ವರ್ಷ ನಿರೀಕ್ಷೆ ಮೀರಿ ಭಕ್ತರು ಆಗಮಿಸಿದ್ದರಿಂದ ಯಾತ್ರೆಯ ಸಂದರ್ಭದಲ್ಲಿ ಅವ್ಯವಸ್ಥೆ ಉಂಟಾಗಿ ತೊಂದರೆಯಾಗಿತ್ತು. ಆದ್ದರಿಂದ ಈ ವರ್ಷ ಅಂತಹ ಯಾವುದೇ ಅನಾಹುತಗಳು ಸಂಭವಿಸದಂತೆ ಎಲ್ಲ ಮುಂಜಾಗ್ರತೆ ವಹಿಸಿರುವುದಾಗಿ ಉತ್ತರಾಖಂಡ ಸಿಎಂ ಪುಷ್ಕರ್ಸಿಂಗ ಧಾಮಿ ತಿಳಿಸಿದ್ದಾರೆ ಎಂದು ಕೇದಾರ ಜಗದ್ಗುರುಗಳು ವಿಜಯವಾಣಿಗೆ ತಿಳಿಸಿದ್ದಾರೆ.
ಕೇದಾರನಾಥನ ಬಾಗಿಲು ತೆರೆಯುವುದಕ್ಕಾಗಿ ಉತ್ತರಾಖಂಡಕ್ಕೆ ಆಗಮಿಸಿದ ಕೇದಾರ ಜಗದ್ಗುರುಗಳು ಡೆಹರಾಡೋನ್ನಲ್ಲಿ ಸಿಎಂ ಪುಷ್ಕರ ಸಿಂಗ್ ಧಾಮಿಯವರನ್ನು ಭೇಟಿ ಮಾಡಿ 2025ರ ಕೇದಾರನಾಥ ಯಾತ್ರೆಯ ಸಿದ್ಧತೆಗಳನ್ನು ಕುರಿತು ಚರ್ಚೆ ನಡೆಸಿದರು. ಹಾಗೂ ಬಾಗಿಲು ತೆರೆಯುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು.
ಆರುತಿಂಗಳ ಕಾಲ ತೆರೆದಿರುವ ಕೇದಾರನಾಥ ಮಂದಿರವು ಪ್ರತಿ ದೀಪಾವಳಿ ಪಾಡ್ಯದಂದು ಮುಚ್ಚಲ್ಪಡುತ್ತದೆ. ಹಾಗೆ ಮಂದಿರ ಮುಚ್ಚಿದ ನಂತರ ಕೇದಾರನಾಥನ ಉತ್ಸವಮೂರ್ತಿಯು ಊಖಿಮಠದ ಓಂಕಾರೇಶ್ವರ ಮಂದಿರದ ಗದ್ದಿಸ್ಥಾನದಲ್ಲಿ ಪೂಜೆಗೊಳ್ಳುತ್ತದೆ. ದೇವಾಲಯದ ಬಾಗಿಲು ತೆರೆಯುವ ಮೂರುದಿನಗಳ ಮೊದಲೇ ಊಖಿಮಠದಿಂದ ಸಕಲ ಮಿಲಿಟರಿ ವಾದ್ಯಮೇಳದೊಂದಿಗೆ ಜಗದ್ಗುರುಗಳ ಕಿರೀಟ ಧರಿಸಿದ ಕೇದಾರನಾಥನ ಉತ್ಸವ ಮೂರ್ತಿಯ ಡೋಲಿ ಮೆರವಣಿಗೆ ಆರಂಭವಾಗುತ್ತದೆ. ಸ್ವತಃ ಕೇದಾರ ಜಗದ್ಗುರುಗಳು ಬಾಗಿಲು ತೆರೆದ ನಂತರ ಕೇದಾರನಾಥನಿಗೆ ಕಿರೀಟ ತೊಡಿಸಿ ಪೂಜೆ ಸಲ್ಲಿಸುವುದು ಪರಂಪರೆ. ಈ ವರ್ಷದ ಕೇದಾರನಾಥ ಜ್ಯೋತಿರ್ಲಿಂಗದ ಪೂಜೆ ಮಾಡುವ ಪ್ರಧಾನ ಅರ್ಚಕರಾಗಿ ಕನ್ನಡಿಗರಾದ ಶ್ರೀವಾಗೀಶಲಿಂಗ ಅವರನ್ನು ನೇಮಕ ಮಾಡಲಾಗಿದೆ.