

Shakti scheme : ಸಕಾಲಕ್ಕೆ ಬಾರದ ಬಸ್ಗಳು, ಬಂದರೂ ಖಾಲಿ ಇರದ ಸೀಟುಗಳು, ನಿಲ್ಲಲೂ ಜಾಗವಿಲ್ಲದೇ ಪರದಾಡುವ ಹೆಣ್ಮಕ್ಕಳು, ಜನದಟ್ಟಣೆಯಲ್ಲಿ ರೇಗಿಸುವತ್ತಿರು ಪೊಲೀಗಳು, ಶಾಲೆ- ಕಾಲೇಜು ಶಿಕ್ಷಣವೇ ಬೇಡವೆನ್ನುತ್ತಿರುವ ಬಡವರು....!
ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯ ಎಫೆಕ್ಟ್. ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯೇನೋ ಒಳ್ಳೆಯದೆ. ಆದರೆ, ಯೋಜನೆಗೆ ಅನುಗುಣವಾಗಿ ಬಸ್ ಸೌಕರ್ಯ ಹೆಚ್ಚಿಸದೇ ಇರುವುದು ಅದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸೈಡ್ ಎಫೆಕ್ಟ್ ಆಗುತ್ತಿದೆ. ಶಾಲೆಗೆ ಹೋಗುವ ಚಿಕ್ಕಮಕ್ಕಳು, ಪ್ರೌಢಾವಾಸ್ಥೆಯಲ್ಲಿರುವ ಪ್ರೌಢ ಶಾಲೆ ಹಾಗೂ ಹದಿಹರೆಯಕ್ಕೆ ಕಾಲಿಡುತ್ತಿರುವ ಕಾಲೇಜು ವಿದ್ಯಾರ್ಥಿನಿಯರು ಶಿಕ್ಷಣದಿಂದಲೇ ವಿಮುಖವಾಗುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದಿಂದ ಶಹರಕ್ಕೆ ಬರಲು ಬೆಳಗಿನ ಜಾವ ಇರುವ ಏಕೈಕ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ರಾತ್ರಿ ವಸ್ತಿಗೆ ಬರುವ ಮುಕ್ಕಾಂ ಬಸ್ ಬೆಳಗಿನ ಆರು ಅಥವಾ ಏಳು ಗಂಟೆಗೆ ಶಹರುಗಳತ್ತ ಮುಖ ಮಾಡುತ್ತವೆ. ಗ್ರಾಮೀಣ ಮಕ್ಕಳಿಗೆ ಈ ಏಕೈಕ ಬಸ್ ಬಿಟ್ಟರೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಅನ್ಯ ವ್ಯವಸ್ಥೆಯೇ ಇಲ್ಲ. ಹೀಗಾಗಿ ಒಂಟಿಗಾಲಲ್ಲಿ ನಿಂತಾದರೂ ಅದೇ ಬಸ್ಗೆ ಕಾಲೇಜಿಗೆ ಹೋಗುವ ಅನಿವಾರ್ಯತೆ ಇದೆ. ಈ ಮಧ್ಯೆ ಪೊಲೀಗಳ ಕಾಟ ಬೇರೆ. ಬಸ್ನಲ್ಲಿ ವಿದ್ಯಾರ್ಥಿನಿಯರನ್ನು ರೇಗಿಸುವುದು, ತಳ್ಳುವುದು, ಮೈ ಕೈ ಮುಟ್ಟಿ ಅಸಹ್ಯವಾಗಿ ವರ್ತಿಸುವುದು ಅಸಹನೀಯವಾಗಿದೆ. ಮನೆಯವರಿಗೆ ಹೇಳಿದರೆ ಎಲ್ಲಿ ಶಿಕ್ಷಣ ಬಿಡಿಸುತ್ತಾರೆಂಬ ಭಯ ವಿದ್ಯಾರ್ಥಿನಿಯರಿಗೆ ಸಂಕಟ ಅಹಿಸುವ ಅನಿವಾರ್ಯತೆ ಸೃಷ್ಠಿಸಿದೆ.
ಬೆಳಗ್ಗೆ ಕಾಲೇಜಿಗೆ ಬಿಡಲೆಂದು ಬಸ್ ನಿಲ್ದಾಣಕ್ಕೆ ಬರುವ ಪಾಲಕರು ಬಸ್ ಅವಸ್ಥೆ ಕಂಡು ಬೈಕ್ ಇಲ್ಲವೇ ಟಂಟಂ ಸಹಾಯದಿಂದ ದೂರದ ಕಾಲೇಜಿಗೆ ಬಿಟ್ಟು ಬರುತ್ತಿದ್ದಾರೆ. ಒಂದೆರೆಡು ದಿನ ಹೀಗಾದರೆ ಹೇಗೋ ಮಾಡಬಹುದು. ದುಡಿಯುವ ವರ್ಗಕ್ಕೆ ದಿನಾ ಬೈಕ್, ಟಂಟಂ ಬಳಸಿ ಬಿಡಲು ಸಾಧ್ಯವೇ? ಹೀಗಾಗಿ ಬಡ ಹಾಗೂ ಸುಸಂಸ್ಕೃತ ಕುಟುಂಬಸ್ಥರು ಹೆಣ್ಣುಮಕ್ಕಳನ್ನು ಕಾಲೇಜು ಶಿಕ್ಷಣ ಮೊಟಕುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬೆಳಗ್ಗೆ ಕಾಲೇಜಿನ ಸಮಯಕ್ಕೆ ಬಸ್ ಸೌಕರ್ಯ ಹೆಚ್ಚಿಸುವ ಅನಿವಾರ್ಯತೆ ಬಿಟ್ಟರೆ ಗ್ರಾಮೀಣ ಬಡ ಹೆಣ್ಣು ಮಕ್ಕಳ ಶೈಕ್ಷಣಿಕ ಅನುಕೂಲತೆ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಸರ್ಕಾರ ಕೂಡಲೇ ಬೆಳಗ್ಗೆ ಶಾಲೆ- ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸದೇ ಹೋದರೆ ಶಕ್ತಿ ಯೋಜನೆಯೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುತ್ತು ಆಗುವುದರಲ್ಲಿ ಅನುಮಾನವಿಲ್ಲ.