

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಲ್ರೌಂಡರ್ ಶಕೀಬ್ ಅಲ್ ಹಸನ್, 'ಈದ್-ಉಲ್-ಅಧಾ' ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ಗೆ ಶನಿವಾರ ಭರ್ಜರಿ ಉಡುಗೊರೆ ನೀಡಿದ್ದಾರೆ. ಈ ಮೂಲಕ ಪತ್ನಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
ಮಾರ್ಚ್ನಲ್ಲಿ ಕರೊನಾ ಹಾವಳಿ ಶುರುವಾದಾಗಿನಿಂದಲೂ ಶಕೀಬ್ ಮತ್ತು ಶಿಶಿರ್ ದಂಪತಿ ಅಮೆರಿಕದಲ್ಲಿ ನೆಲೆಸಿದೆ. ಅಮೆರಿಕದಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ನಡುವೆಯೂ ಅಲ್ಲಿಂದ ವಾಪಸ್ ಬರಲು ಅವರಿಗೆ ಸಾಧ್ಯವಾಗಿಲ್ಲ. ಈ ಕಠಿಣ ಸಮಯದಲ್ಲೂ ಶಕೀಬ್, ಪತ್ನಿಯ ಪಾಲಿಗೆ ಸ್ಮರಣೀಯಗೊಳಿಸಿದ್ದಾರೆ. ಮರ್ಸಿಡೀಸ್-ಬೆಂಜ್ನ ಹೊಸ ಬ್ರಾಂಡ್ ಕಾರನ್ನು ಹಬ್ಬದ ದಿನದಂದು ಶಕೀಬ್ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಪ್ರಾರಂಭಿಕ ಬೆಲೆ 50 ಲಕ್ಷ ರೂಪಾಯಿಗೂ ಅಧಿಕ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಐಪಿಎಲ್ಗೆ ಯುಎಇ ಕೂಡ ಸುರಕ್ಷಿತ ಅಲ್ಲವಂತೆ!
ಹೊಸ ಕಾರಿನ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ 31 ವರ್ಷದ ಉಮ್ಮೆ ಅಹ್ಮದ್ ಶಿಶಿರ್, 'ಮೈ ಈಡಿ ಫ್ರಂ ದಿ ಹಸ್ಬಂಡ್' ಎಂದು ಬರೆದುಕೊಂಡಿದ್ದಾರೆ. ಶಕೀಬ್-ಶಿಶಿರ್ 2012ರ ಡಿಸೆಂಬರ್ 12ರಂದು ವಿವಾಹವಾಗಿದ್ದರು. ಫಿಕ್ಸಿಂಗ್ ಆಮಿಷದ ಬಗ್ಗೆ ಐಸಿಸಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಶಕೀಬ್ ಸದ್ಯ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. 2019ರ ಅಕ್ಟೋಬರ್ನಲ್ಲಿ ಅವರು ಕೊನೆಯದಾಗಿ ಕ್ರಿಕೆಟ್ ಆಡಿದ್ದಾರೆ.