ವಿಶ್ವಕಪ್​ ಬಳಿಕ ರಾಜಕೀಯದತ್ತ ಶಕೀಬ್​ ಅಲ್​ ಹಸನ್ ಗಮನ; ಬಾಂಗ್ಲಾದೇಶದ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜು!

shakeeb web
Published on

ಢಾಕಾ: ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕ ಶಕೀಬ್​ ಅಲ್​ ಹಸನ್​ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದು, ಜನವರಿಯಲ್ಲಿ ನಡೆಯಲಿರುವ ದೇಶದ 12ನೇ ಸಂಸತ್​ ಚುನಾವಣೆಯಲ್ಲಿ ಅವರು ಆಡಳಿತ ಪಕ್ಷ ಅವಾಮಿ ಲೀಗ್​ ಪರ ಸ್ಪರ್ಧಿಸಲಿದ್ದಾರೆ. ತವರು ಜಿಲ್ಲೆಯ ಮಗುರಾ&1 ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ. ಜನವರಿ 7ರಂದು ಮತದಾನ ನಡೆಯಲಿದೆ.

ಕಳೆದ ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಬೆರಳಿನ ಗಾಯಕ್ಕೊಳಗಾಗಿ ಹೊರಬಿದ್ದಿದ್ದ ಶಕೀಬ್​, ಸದ್ಯ ಕ್ರಿಕೆಟ್​ನಿಂದ ದೂರವಿದ್ದಾರೆ. ನವೆಂಬರ್​ 28ರಿಂದ ಬಾಂಗ್ಲಾ ತಂಡ ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಆಡಲಿದ್ದು, ಶಕೀಬ್​ ಇದಕ್ಕೆ ಅಲಭ್ಯರಾಗಿದ್ದಾರೆ. ವಿಶ್ವಕಪ್​ ನಂತರ ಏಕದಿನ ತಂಡದ ನಾಯಕತ್ವವನ್ನೂ ತ್ಯಜಿಸಿರುವ ಅವರು, ಟಿ20 ತಂಡದ ನಾಯಕರಾಗಿ ಮಾತ್ರ ಮುಂದುವರಿಯಲಿದ್ದಾರೆ.

ಈ ಮುನ್ನ ಬಾಂಗ್ಲಾದ ಮಾಜಿ ನಾಯಕ ಹಾಗೂ ವೇಗಿ ಮುಶ್ರಫೆ ಮುರ್ತಜ ಕೂಡ ಸಕ್ರಿಯ ಕ್ರಿಕೆಟಿಗರಾಗಿದ್ದಾಗಲೇ ರಾಜಕೀಯ ಪ್ರವೇಶಿಸಿ, ಕಳೆದ ಚುನಾವಣೆಯ ವೇಳೆ ಸಂಸದರಾಗಿ ಆಯ್ಕೆಯಾಗಿದ್ದರು. ಶ್ರೀಲಂಕಾದ ಸನತ್​ ಜಯಸೂರ್ಯ ಮತ್ತು ಭಾರತದ ಸಚಿನ್​ ತೆಂಡುಲ್ಕರ್​ (ರಾಜ್ಯಸಭೆ) ಕೂಡ ಸಕ್ರಿಯ ಕ್ರಿಕೆಟಿಗರಾಗಿದ್ದಾಗಲೇ ಸಂಸದರೂ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net