

Shahid Afridi: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂ-ಮುಸ್ಲಿಂ ಕಾರ್ಡ್ ಬಳಸಿ ರಾಜಕೀಯ ಮಾಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಗಂಭೀರ ಆರೋಪ ಮಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅಫ್ರಿದಿ, ಅಧಿಕಾರಕ್ಕೆ ಬರಲು ಧರ್ಮದ ಕಾರ್ಡ್ ಬಳಸಿದ ಈ ಸರ್ಕಾರ, ಅದೇ ಆಟವನ್ನು ಮತ್ತೆ ಮುಂದುವರೆಸಿದೆ, ಇದು ತುಂಬಾ ಅಸಹ್ಯಕರ ಮನಸ್ಥಿತಿ, ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುವವರೆಗೂ ಇಂತಹ ರಾಜಕೀಯ ನೀತಿಗಳು ಚಲಾವಣೆಯಲ್ಲಿರುತ್ತವೆ, ಭಾರತ ಸರ್ಕಾರ ಮುಂದಿನ ಇಸ್ರೇಲ್ ಆಗಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ಗೆ ಶಾಹಿದ್ ಶಭಾಷ್..
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಕಾರಾತ್ಮಕ ಮನೋಭಾವ ಹೊಂದಿದ್ದು, ಇಡೀ ಪ್ರಪಂಚದೊಂದಿಗೆ ಸಂಭಾಷಣೆಯ ಮೂಲಕ ಮುಂದುವರೆಸಲು ಬಯಸುತ್ತಾರೆ ಎಂದರು.
ಭಾನುವಾರ ನಡೆದ ಉಭಯ ದೇಶಗಳ ಹಣಾಹಣಿಯಲ್ಲಿ ಭಾರತೀಯ ಆಟಗಾರರು ಗೆಲಲುವಿನ ನಂತರ, ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ ಘಟನೆ ವಿವಾದದ ಸ್ವರೂಪ ಪಡೆದುಕೊಳ್ಳುತಿದ್ದಂತೆ ಅಫ್ರಿದಿ ಈ ಹೇಳಿಕೆಗಳು ಬಂದಿವೆ. ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಮೃತರಾದ ನಂತರ, ಅವರೊಂದಿಗೆ ನಿಲ್ಲುವ ಸಂಕೇತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾಗಿಯಾಗಬಾರದು ಎಂದು ಅನೇಕ ವಲಯದಿಂದ ವಿರೋಧ ವ್ಯಕ್ತವಾಗಿತ್ತು, ಈ ವೇಳೆ ಸರ್ಕಾರದ ಆದೇಶ ಪಾಲಿಸಿದ್ದ ಬಿಸಿಸಿಐ ಭಾನುವಾರದ ಪಂದ್ಯದಲ್ಲಿ ಪಾಲ್ಗೊಂಡು ತನ್ನದೇ ಆದ ಪ್ರತಿಭಟನೆಯ ಮಾರ್ಗವಾಗಿ ಹಸ್ತಲಾಘವದ ತಿರಸ್ಕಾರವನ್ನು ಆಯ್ಕೆ ಮಾಡಿಕೊಂಡಿತು.ಇದಕ್ಕೆ ಆಕ್ರೋಶಗೊಂಡಿರುವ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಐಸಿಸಿ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ದೂರು ದಾಖಲಿಸಿದೆ. ಏಷ್ಯಾ ಕಪ್‌ನ ಉಳಿದ ಪಂದ್ಯಗಳಿಂದ ಪೈಕ್ರಾಫ್ಟ್ ಅವರನ್ನು ಕೈಬಿಡಬೇಕೆಂಬ ಪಿಸಿಬಿಯ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ.(ಏಜೆನ್ಸೀಸ್)