

ಇಸ್ಲಾಮಾಬಾದ್: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ನೂತನ ಪ್ರಧಾನಿ ಆಗಲಿರುವ ಶಹಬಾಜ್ ಷರೀಫ್ ಮದುವೆಯ ವಿಷಯದಲ್ಲಿ ಇಮ್ರಾನ್ ಖಾನ್ಗಿಂತಲೂ ಮುಂದಿದ್ದು, ಅವರ ಕುರಿತ ಮತ್ತಷ್ಟು ಆಸಕ್ತಿಕರ ಅಂಶಗಳು ಈಗ ಮತ್ತೆ ಮುನ್ನೆಲೆಗೆ ಬಂದು ಹರಿದಾಡುತ್ತಿವೆ.
ಪಾಕ್ನ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಆಗಿರುವ ಶಹಬಾಜ್ ಷರೀಫ್, ಒಟ್ಟು ಐದು ಮದುವೆಯಾಗಿದ್ದು, ಆ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದು, ಸದ್ಯ ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ಮದುವೆ ಮಾತ್ರವಲ್ಲದೆ ಇವರ ಪ್ರೀತಿಯ ವಿಚಾರವೂ ಕೂಡ ಬಹಳಷ್ಟು ಆಸಕ್ತಿ ಮೂಡಿಸಿದ್ದು, ಸುದ್ದಿಯಲ್ಲಿದೆ.
ಇಮ್ರಾನ್ ಖಾನ್ ಮೂರು ಮದುವೆಯಾಗಿದ್ದರೆ, ಶಹಬಾಜ್ ಐದು ಮದುವೆಯಾಗಿದ್ದಾರೆ. 1973ರಲ್ಲಿ ಮೊದಲಿಗೆ ನುಸ್ರತ್ ಶಹಬಾಜ್ರನ್ನು ಮದುವೆಯಾಗಿ 93ರ ವರೆಗೆ ಸಂಸಾರ ನಡೆಸಿದ ಶಹಬಾಜ್, ಬಳಿಕ ಆಲಿಯಾ ಹನಿ ಎಂಬಾಕೆಯನ್ನು ಮದುವೆ ಆಗುತ್ತಾರೆ. ಅದರಲ್ಲೂ ಈ ಮದುವೆಗೆ ಸೋದರ ನವಾಜ್ ಷರೀಫ್ರ ಭಾರಿ ವಿರೋಧವಿದ್ದರೂ ಶಹಬಾಜ್ ಲೆಕ್ಕಿಸದೆ ಮದುವೆಯಾಗಿದ್ದರು. ನಂತರ ಡೈವೋರ್ಸ್ ಕೊಡುವಂತೆ ಒತ್ತಾಯಿಸಿದ್ದರೂ ಕೊಟ್ಟಿರಲಿಲ್ಲ. ಅದಾಗ್ಯೂ ಈ ಮದುವೆ ಬಾಳಿಕೆ ಬಂದಿದ್ದು ಒಂದೇ ವರ್ಷ.
ನಂತರ ನಿಲೋಫರ್ ಖೋಸಾ ಎಂಬಾಕೆಯನ್ನು ಮದುವೆಯಾದರು. ಅದಾದ ಬಳಿಕ ರಹಸ್ಯವಾಗಿ 2003ರಲ್ಲಿ ತೆಹಮಾನಿಯಾ ದುರಾನಿ ಮತ್ತು 2012ರಲ್ಲಿ ಕಲ್ಸುಮ್ ಹಯೀ ಎಂಬವರನ್ನು ಮದುವೆಯಾದರು. ಸದ್ಯ ಇವರು ನುಸ್ರತ್ ಮತ್ತು ತೆಹಮಾನಿಯಾ ದುರಾನಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ. ಉಳಿದ ಮೂವರಿಗೆ ವಿಚ್ಛೇದನ ಕೊಟ್ಟಿರುತ್ತಾರೆ.
ಶಹಬಾಜ್ ಷರೀಫ್ ತನ್ನ ಪತ್ನಿ ಆಲಿಯಾ ಹನಿಗೆಂದೇ ಪಂಜಾಬ್ನಲ್ಲಿ ಫ್ಲೈಓವರ್ ಒಂದನ್ನು ನಿರ್ಮಿಸಿದ್ದು, ಅದು ಹನಿ ಬ್ರಿಡ್ಜ್ ಎಂದೇ ಹೆಸರಾಗಿದೆ. ಅಷ್ಟಕ್ಕೂ ಇವರು ಈ ಸೇತುವೆ ಕಟ್ಟಿಸಿದ್ದೇಕೆ ಗೊತ್ತೇ? ಪತ್ನಿ ಮನೆಗೆ ಬರುವುದು ತಡ ಆಗಬಾರದು ಅಂತ.
ಇನ್ನು 8 ವರ್ಷಗಳಿಂದ ಪ್ರೀತಿಸುತ್ತಿದ್ದ ತೆಹಮಾನಿಯಾಳನ್ನು ಕದ್ದುಮುಚ್ಚಿ ಮದುವೆಯಾಗಿದ್ದ ಶಹಬಾಜ್, ಅದನ್ನು ಕುಟುಂಬ ಸದಸ್ಯರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದರು.
ಇದಲ್ಲದೆಯೂ ಶಹಬಾಜ್ ಬಗ್ಗೆ ಮತ್ತಷ್ಟು ಆಸಕ್ತಿಕರ ಅಂಶಗಳಿವೆ. ಶಹಬಾಜ್ ಕ್ಯಾನ್ಸರ್ ರೋಗಿಯಾಗಿದ್ದು, ಬಳಿಕ ಅದರಿಂದ ಗುಣವಾಗಿ ಚೇತರಿಸಿಕೊಂಡಿದ್ದರು. ಹಾಡುವುದನ್ನು ಇಷ್ಟಪಡುವ ಶಹಬಾಜ್, ದಿನವೂ ಈಜುತ್ತಾರೆ ಮತ್ತು ತಿನ್ನುವುದರಲ್ಲೂ ಫಾಸ್ಟ್!
ಇನ್ನು ಇತ್ತೇಫಾಕ್ ಗ್ರೂಪ್ ಹೆಸರಿನಲ್ಲಿ ಉದ್ಯಮ ಹೊಂದಿರುವ ಶಹಬಾಜ್ ಶತಕೋಟಿ ಲೆಕ್ಕದ ವಹಿವಾಟು ಹೊಂದಿದ್ದಾರೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯೂ ಆಗಿದ್ದ ಶಹಬಾಜ್, ಪ್ರಧಾನಿ ಆಗುವಂತೆ ಮುಷ್ರಫ್ರಿಂದ ಕರೆ ಬಂದರೂ ಸಹೋದರನಿಗಾಗಿ ಅದನ್ನು ತ್ಯಾಗ ಮಾಡಿದ್ದರು. ಶಹಬಾಜ್ ಐವರು ಸಹೋದರರನ್ನು ಹೊಂದಿದ್ದಾರೆ.