

ಮುಂಬೈ: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಬಿಸಿಸಿಐ ಮೆಗಾ ಹರಾಜಿಗೆ ಭರದಿಂದ ಸಿದ್ಧತೆ ನಡೆಸುತ್ತಿದೆ. ಇದರ ನಡುವೆಯೇ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳ ಮಾಲೀಕರ ಸಣೆಯನ್ನು ಜುಲೈ 31ರಂದು ನಡೆಸಿದ್ದು, ಆಟಗಾರರ ರಿಟೀನ್ ಮಾಡುವ ವಿಚಾರವಾಗಿ ಸಿಎಸ್ಕೆ, ಎಸ್ಆರ್ಎಚ್ ಹಾಗೂ ಕೆಕೆಆರ್ ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.
ಬುಧವಾರ (ಜುಲೈ 31) ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ನಡೆದ ಐಪಿಎಲ್ ಮಾಲೀಕರ ಸಭೆಯಲ್ಲಿ ಶಾರುಖ್ ಖಾನ್ ಮೆಗಾ ಹರಾಜಿಗೆ ವಿರೋಧ ವ್ಯಕ್ತಪಡಿಸಿದ್ದಾರೆಂದು ಕ್ರಿಕ್ಬುಕ್ ವರದಿ ಮಾಡಿದೆ. ಮೆಗಾ ಹರಾಜು ಬದಲು ಸಣ್ಣ ಮಟ್ಟದ ಹರಾಜು ನಡೆಯಲಿ ಎಂದು ಬಿಸಿಸಿಐ ಬಳಿ ಶಾರುಖ್ ಕೇಳಿದಾಗ, ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯ ಮಧ್ಯಪ್ರವೇಶಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಶಾರುಖ್ ಮತ್ತು ವಾಡಿಯ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯಾ, ಶಾರುಕ್ ಖಾನ್ ಅವರನ್ನು ನಾನು 25 ವರ್ಷದಿಂದ ಬಲ್ಲೆ. ಇಲ್ಲಿ ಯಾವುದೇ ದ್ವೇಷ ಇಲ್ಲ. ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಎಲ್ಲರಿಗೂ ಸರಿಹೊಂದುವಂತೆ ನಿರ್ಧಾರ ಕೈಗೊಳ್ಳಬೇಕಿದೆ ಅಷ್ಟೇ. ನನ್ನ ಹಾಗೂ ಶಾರುಖ್ ನಡುವೆ ವಾಗ್ವಾದ ನಡೆದಿದೆ ಎಂಬುದು ಸುಳ್ಳು ಎಂದು ನೆಸ್ ವಾಡಿಯಾ ಹೇಳಿದ್ದಾರೆ.
ಶಾರುಖ್ ಖಾನ್ ವಾದಕ್ಕೆ ಎಸ್ಆರ್ಎಚ್ ಮಾಲಕಿ ಕಾವ್ಯಾ ಮಾರನ್ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಕಾವ್ಯಾ ಮಾರನ್ ಐಪಿಎಲ್ ಮೆಗಾ ಹರಾಜು ನಡೆಸುವ ವಿರುದ್ಧ ಮಾತನಾಡಿದರು. ಒಂದು ತಂಡವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಕಿರಿಯ ಆಟಗಾರರು ತಯಾರಾಗಲು ಸ್ವಲ್ಪ ಸಮಯ ಮತ್ತು ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ. ನಮ್ಮ ತಂಡದ ಅಭಿಷೇಕ್ ಶರ್ಮ ಅವರು ಸ್ಥಿರ ಪ್ರದರ್ಶನ ನೀಡಲು ಮೂರು ವರ್ಷ ಸಮಯ ತೆಗೆದುಕೊಳ್ಳಬೇಕಾಯಿತು. ಇತರ ತಂಡಗಳಲ್ಲಿಯೂ ಇಂತಹ ಅನೇಕ ಉದಾಹರಣೆಗಳಿವೆ ಎಂದು ಕಾವ್ಯಾ ಸಭೆಯಲ್ಲಿ ಹೇಳಿದ್ದಾರೆ.
ಬಿಸಿಸಿಐ ಬುಧವಾರ (ಜುಲೈ 31) ಸಂಜೆ ಎಲ್ಲ ಐಪಿಎಲ್ ಫ್ರಾಂಚೈಸಿ ಮಾಲೀಕರ ಸಭೆಯನ್ನು ಮುಂಬೈನ ಮುಖ್ಯ ಕಚೇರಿಯಲ್ಲಿ ಕರೆದಿತ್ತು. ಈ ವೇಳೆ ಮೆಹಾ ಹರಾಜು, ಆಟಗಾರರನ್ನು ಉಳಿಸಿಕೊಳ್ಳುವುದು ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ವೇಳೆ ಚರ್ಚಿಸಲಾಗಿದೆ. ಫ್ರಾಂಚೈಸ್ ಮಾಲೀಕರು ಆಟಗಾರರ ನಿಯಮಗಳು, ವ್ಯಾಪಾರೀಕರಣ, ಲೈಸೆನ್ಸ್ ಮತ್ತು ಗೇಮಿಂಗ್ ಸೇರಿದಂತೆ ಇತರ ವಾಣಿಜ್ಯ ಅಂಶಗಳ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆಂದು ತಿಳಿದುಬಂದಿದೆ.