ಗೌತಮ್ ಗಂಭೀರ್​ನ ತಬ್ಬಿಕೊಂಡು ಹಣೆಗೆ ಮತ್ತಿಟ್ಟ ಎಸ್​​ಆರ್​ಕೆ; ಕೆಕೆಆರ್ ಗೆಲವು ಸಂಭ್ರಮಿಸಿದ ಕಿಂಗ್​ ಖಾನ್​

gautamgambhir
Published on

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಜಯಗಳಿಸಿತು. ಐಪಿಎಲ್ ಇತಿಹಾಸದಲ್ಲಿ ಕೆಕೆಆರ್‌ಗೆ ಇದು ಮೂರನೇ ಟ್ರೋಫಿಯಾಗಿದೆ. ಕೆಕೆಆರ್​ ತಂಡ ಗೆದ್ದ ಖುಷಿಯಲ್ಲಿದ್ದ ತಂಡದ ಮಾಲೀಕರಾದ ಶಾರ್​ಖ್​ ಖಾನ್​​ ಅವರು ಟೀಮ್​ ಕೋಚ್​ ಆಗಿರುವ ಗೌತಮ್​ ಗಂಭೀರ್​ ಅವರಿಗೆ ಮುತ್ತು ಕೊಟ್ಟಿದ್ದಾರೆ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಪಂದ್ಯ ವಿಚಾರಕ್ಕೆ ಬರುವುದಾದರೆ, ನಿನ್ನೆ (ಮೇ 26) ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್​ ಕೇವಲ 18.3 ಓವರ್​ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು. ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್​ ಹರಾಜಿನಲ್ಲಿ 24.75 ಕೋಟಿ ರೂ.ಗೆ ಕೋಲ್ಕತ್ತ ಪಾಲಾದ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (2) ಅವರನ್ನು ಔಟ್ ಮಾಡಿದರು. ನಂತರದ ಓವರ್‌ನಲ್ಲಿ ವೈಭವ್ ಅರೋರಾ, ಟ್ರಾವಿಸ್​ ಹೆಡ್ ಡಕ್ ಔಟ್ ಮಾಡಿದರು. ಇದಾದ ಬಳಿಕ ಸ್ಟಾರ್ಕ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಆ ನಂತರ ಎಸ್​ಆರ್​ಎಚ್​ ತಂಡ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ (24) ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​ ಆಯಿತು. ಮಾರ್ಕ್ರಾಮ್ 20ರನ್ ಗಳಿಸಿದರು. ಕೋಲ್ಕತ್ತ ಬೌಲರ್‌ಗಳು ಎಲ್ಲಾ ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್​ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ನರೈನ್ ಮತ್ತು ಅರೋರಾ ಒಂದು ವಿಕೆಟ್ ಪಡೆದರು.

ಹೈದರಾಬಾದ್​​ ನೀಡಿದ 114ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್​, 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಕಲೆಹಾಕಿ ವಿಜಯೋತ್ಸವ ಆಚರಿಸಿತು. ಕೆಕೆಆರ್​ ಪರ ವೆಂಕಟೇಶ್​ ಅಯ್ಯರ್​ (52) ಅತ್ಯುತ್ತಮ ಆಟವಾಡಿದರು. ಶಾರುಖ್ ಖಾನ್ ತಮ್ಮ ಮಕ್ಕಳಾದ ಸುಹಾನಾ ಖಾನ್, ಅಬ್ರಾಮ್ ಖಾನ್ ಮತ್ತು ಆರ್ಯನ್ ಖಾನ್ ಅವರೊಂದಿಗೆ ಈ ಸಂಭ್ರಮವನ್ನು ಆಚರಿಸಿದರು.

KKR ಮೆಂಟರ್ ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಂಡ ಶಾರುಖ್ ಖಾನ್. ಪ್ರೀತಿಯಿಂದ ಹಣೆಗೆ ಮುತ್ತಿಕ್ಕಿದ್ದಾರೆ. ಈ ಕುರಿತಾದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ಗೌತಮ್ ಗಂಭೀರ್ ಕೆಕೆಆರ್​​ನ ಮೆಂಟರ್ ಆಗಿ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಹಿಂದೆ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡ ಎರಡು ಟ್ರೋಫಿಗಳನ್ನು ಗೆದ್ದುಕೊಂಡಿತು. ಇದೀಗ 10 ವರ್ಷಗಳ ನಂತರ ಮತ್ತೆ ಕೆಕೆಆರ್ ಜಯಭೇರಿ ಬಾರಿಸಿದೆ.

ಕೆಕೆಆರ್ ಗೆಲುವಿನ ನಂತರ ಶಾರುಖ್ ಖಾನ್ ಅವರ ಸಂಭ್ರಮಾಚರಣೆ ಅಬ್ಬರಿಸಿದೆ. ಮಗಳು ಸುಹಾನಾ ಅವರನ್ನು ಸ್ವಾಗತಿಸಿದ ಶಾರುಖ್ ಖಾನ್. ಅಲ್ಲದೆ, ಈ ಗೆಲುವಿನಿಂದ ಸುಹಾನಾ ಭಾವುಕರಾಗಿದ್ದಾರೆ. ಈ ಯಶಸ್ಸಿನಿಂದ ಶಾರುಖ್ ಮಕ್ಕಳೂ ತುಂಬಾ ಖುಷಿಯಾಗಿದ್ದಾರೆ. ಕೆಕೆಆರ್ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ ಸುನಿಲ್ ನರೈನ್ ಗೌತಮ್ ಗಂಭೀರ್ ಜೊತೆ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net