

ನವದೆಹಲಿ: ಗೌತಮ್ ಗಂಭೀರ್ ಅವರ ಮಾರ್ಗದರ್ಶನದ ಅಡಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಖುಷಿಯಲ್ಲಿ ಗಂಭೀರ್ ಹಾಗೂ ತಂಡದ ಮಾಲೀಕರಾದ ಶಾರುಖ್ ಖಾನ್ ಅವರು ಇದ್ದಾರೆ. ಈ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿಯೊಂದು ವೈರಲ್ ಆಗಿದೆ.
ಚಾಂಪಿಯನ್ ಪಟ್ಟದ ಬೆನ್ನಲ್ಲೇ ಗೌತಮ್ ಗಂಭೀರ್ ಕೆಕೆಆರ್ ತಂಡವನ್ನು ತೊರೆಯುವ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಬಿಸಿಸಿಐ ಕಡೆಯಿಂದ ಗೌತಮ್ ಗಂಬೀರ್ ಅವರಿಗೆ ಬಿಗ್ ಆಫರ್ ಸಿಕ್ಕಿರುವುದು. ಅಂದರೆ ಟೀಮ್ ಇಂಡಿಯಾದ ಕೋಚ್ ಆಗುವಂತೆ ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ ಎನ್ನುವ ಸುದ್ದಿಯೊಂದು ಹಲವರು ದಿನಗಳಿಂದ ಹರಿದಾಡುತ್ತಿದೆ.
ಈ ಸುದ್ದಿ ಬೆನ್ನಲ್ಲೇ ಅತ್ತ ಶಾರುಖ್ ಖಾನ್ ಕೂಡ ಅಲರ್ಟ್ ಆಗಿದ್ದಾರೆ. ಗೌತಮ್ ಗಂಭೀರ್ ಅವರನ್ನು ಬಿಟ್ಟು ಕೊಡಲು ಕಿಂಗ್ ಖಾನ್ ಕೂಡ ಸಿದ್ಧರಿಲ್ಲ. ಹೀಗಾಗಿಯೇ ಕೆಕೆಆರ್ ಮೆಂಟರ್ಗೆ ಶಾರುಖ್ ಖಾನ್ ಖಾಲಿ ಚೆಕ್ನ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಹತ್ತು ವರ್ಷಗಳವರೆಗೆ ಗೌತಮ್ ಗಂಭೀರ್ ಕೆಕೆಆರ್ ತಂಡದ ಮುಖ್ಯ ಹುದ್ದೆಯಲ್ಲಿರಬೇಕೆಂದು ಶಾರುಖ್ ಖಾನ್ ಬಯಸಿದ್ದಾರೆ. ಇದಕ್ಕಾಗಿ ಗಂಭೀರ್ಗೆ ಎಷ್ಟು ಹಣ ಬೇಕು ಅದನ್ನು ಖಾಲಿ ಚೆಕ್ನಲ್ಲಿ ಬರೆದು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ಕೆಕೆಆರ್ ತಂಡಕ್ಕೆ ನಿಮ್ಮ ಸೇವೆಯ ಅತ್ಯಗತ್ಯವಿದೆ ಎಂಬುದನ್ನು ಶಾರುಖ್ ಖಾನ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೆಕೆಆರ್ ಹಾಗೂ ಬಿಸಿಸಿಐ ಬೇಡಿಕೆಯಿಂದ ಗೌತಮ್ ಗಂಭೀರ್ ಅವರ ಬೇಡಿಕೆ ಹೆಚ್ಚಾಗಿದೆ. ಬಿಗ್ ಆಫರ್ಗಳು ಕಣ್ಮುಂದೆ ಇರುವಾಗ ಗೌತಮ್ ಗಂಭೀರ್ ಅವರು ಯಾರ ಕೈ ಹಿಡಿಯಲಿದ್ದಾರೆ ಎನ್ನುವ ನಿರ್ಧಾರ ಅವರಿಗೆ ಬಿಟ್ಟಿದ್ದು, ಆದರೆ ಕ್ರಿಕೆಟ್ ಅಭಿಮಾನಿಗಳು ಗೌತಮ್ ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಭಾರತ ತಂಡದ ಕೋಚ್ ಹುದ್ದೆಯಲ್ಲಿರುವವರು ಯಾವುದೇ ಫ್ರಾಂಚೈಸಿ ಲೀಗ್ನಲ್ಲಿ ತಂಡದ ತರಬೇತುದಾರ ಅಥವಾ ಇನ್ನಿತರ ಹುದ್ದೆಗಳಲ್ಲಿರಬಾರದು ಎಂಬ ನಿಯಮವಿದೆ. ಹೀಗಾಗಿ ಗೌತಮ್ ಗಂಭೀರ್ ಅವರ ಮುಂದಿನ ನಡೆಯೇನು ಎಂಬುದೇ ಕುತೂಹಲ ಇದೆ.