

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಮಗಳ ಮೇಲೆ ಸಹೋದರ ಹಾಗೂ ತಂದೆಯ ಜೊತೆ ಸೇರಿಕೊಂಡು ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಘಟನೆಯು ಉತ್ತರಪ್ರದೇಶದ ಔರಿಯಾ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು (Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Superintendent Of Police) ಅಲೋಕ್ ಮಿಶ್ರಾ, ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ಅಪ್ರಾಪ್ತ ವಯಸ್ಕಳು ತನ್ನ ಸಂಬಂಧಿಯೊಬ್ಬರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದು, ಡಿಎನ್ಎ ಟೆಸ್ಟ್ನಲ್ಲಿ ಆರೋಪಿಗಳು ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಹೇಳಿಕೆಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೌಟುಂಬಿಕ ಕಲಹ ಕಾರಣ ಸಂತ್ರಸ್ತೆ ಆಕೆಯ ತಾಯಿಯೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಳು. 2020ರಲ್ಲಿ ಅವರನ್ನು ವಾಪಸ್ ಔರಿಯಾಗೆ ಕರೆತರಲಾಗಿತ್ತು. 2023ರಲ್ಲಿ ಸಂತ್ರಸ್ತೆಯ ತಾಯಿ ನಿಧನರಾಗಿದ್ದು, ಸಂತ್ರಸ್ತೆಯ ತಾಯಿ ಸಾವಿಗೆ ಕಾರಣವಾದ ಸಂದರ್ಭಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
ಸಂತ್ರಸ್ತೆ ಹಾಗೂ ಆಕೆಯ ತಾಯಿ ದೆಹಲಿಯಿಂದ ಮರಳಿದ ಬಳಿಕ ಆರೋಪಿಗಳು ಬಾಲಕಿ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ಧಾರೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಗರ್ಭಪಾತ ಮಾಡಿಸುವಂತೆ ಒತ್ತಾಯ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪೋಕ್ಸೋ, ಬಿಎನ್ಎಸ್ 64 (ಎಫ್), 65 (1), 232 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Superintendent Of Police) ಅಲೋಕ್ ಮಿಶ್ರಾ ತಿಳಿಸಿದ್ದಾರೆ.