16ರ ಬಾಲಕಿಗೆ ಲವ್​ ಲೆಟರ್​ ಕೊಟ್ಟ 66ರ ವೃದ್ಧ: ಎಚ್ಚರಿಸಿದ್ರೂ ಸುಮ್ಮನಾಗದ ಆತ ಮಾಡಿದ್ದೇನು?

Love Letter
Published on

ಚೆನ್ನೈ: ಹದಿನಾರು ವರ್ಷದ ಬಾಲಕಿಗೆ ಲವ್​ ಲೆಟರ್​ ನೀಡಿದ ಆರೋಪದ ಮೇಲೆ 66 ವರ್ಷದ ವೃದ್ಧನನ್ನು ಕೊಯಮತ್ತೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿಯನ್ನು ಮೊಹಮ್ಮದ್​ ಬಹಿರ್​ ಭಾಷಾ ಎಂದು ಗುರುತಿಸಲಾಗಿದೆ. ತನ್ನ ನೆರೆಮನೆಯ ಬಾಲಕಿಗೆ ಲವ್​ ಲೆಟರ್​ ನೀಡಿದ ಆರೋಪಿ, ಅದರಲ್ಲಿ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಒಪ್ಪಿಗೆಯೇ ಎಂದು ಬರೆಯಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕೊಟ್ಟ ಪತ್ರವನ್ನು ತನ್ನ ಮನೆಗೆ ತೆಗೆದುಕೊಂಡು ಹೋದ ಬಾಲಕಿ ತಂದೆ-ತಾಯಿಗೆ ನೀಡಿ, ಘಟನೆಯನ್ನು ವಿವರಿಸಿದ್ದಾಳೆ. ಪತ್ರವನ್ನು ನೋಡಿ ಆಕ್ರೋಶಗೊಂಡ ಬಾಲಕಿ ಕುಟುಂಬ ತಕ್ಷಣ ಆರೋಪಿ ಭಾಷಾ ಕುಟುಂಬಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಯಾವುದೇ ದೂರು ನೀಡಬೇಡಿ ಎಂದು ಬೇಡಿಕೊಂಡು, ಆರೋಪಿಯಿಂದ ಕ್ಷಮೆ ಕೇಳಿಸುವುದಾಗಿ ಭಾಷಾ ಕುಟುಂಬ ಹೇಳಿದೆ.

ಇಷ್ಟಕ್ಕೆ ಸುಮ್ಮನಾಗದ ಭಾಷಾ ಮತ್ತೆ ಬಾಲಕಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬೆದರಿಕೆಯನ್ನೂ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಮತ್ತೆ ತನ್ನ ಪಾಲಕರಿಗೆ ವಿಷಯ ಮುಟ್ಟಿಸಿದ್ದಾಳೆ. ಇನ್ನು ಸುಮ್ಮನಾದರೇ ಸರಿಹೋಗುವುದಿಲ್ಲ ಎಂದರಿತ ಬಾಲಕಿ ಕುಟುಂಬ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಭಾಷಾನನ್ನು ಬಂಧಿಸಿ ಜೈಲಿಗಟ್ಟಿರುವುದಾಗಿ ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net