

ಬೆಂಗಳೂರು: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಅಪರಿಚಿತನ ಪ್ರೇಮದ ಬಲೆಗೆ ಬಿದ್ದಿದ್ದ 8ನೇ ತರಗತಿ ವಿದ್ಯಾರ್ಥಿನಿ, ಪಾಲಕರನ್ನು ತೊರೆದು ವಿಮಾನದಲ್ಲಿ ಹೈದರಾಬಾದ್ಗೆ ತೆರಳಲು ಏರ್ಪೋರ್ಟ್ನಲ್ಲಿ ಕಾಯುತ್ತಿದ್ದಾಗ ಸಿಕ್ಕಿ ಬಿದ್ದಿರುವ ಕುತೂಲಹಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣ ದಲ್ಲಿದ್ದ ಬಾಲಕಿಯನ್ನು ತಂದೆಯೇ ರಕ್ಷಿಸಿ ಮನೆಗೆ ಕರೆತಂದಿದ್ದಾರೆ. 14 ವರ್ಷದ ಬಾಲಕಿಯ ತಂದೆ ಕೊಟ್ಟ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗ ಸೈಬರ್ ಕ್ರೖೆಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?: ಉತ್ತರಹಳ್ಳಿಯ ಎಜಿಎಸ್ ಲೇಔಟ್ನ ನಿವಾಸಿಯಾಗಿರುವ ಬಾಲಕಿ, ಪ್ರತಿಷ್ಠಿತ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಈಕೆ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದು, ಆನ್ಲೈನ್ನಲ್ಲಿ ಸಕ್ರಿಯಳಾಗಿದ್ದಳು. ಜೂ.8ರಂದು ಬೆಳಗ್ಗೆ 10.30ಕ್ಕೆ ಪಾಲಕರ ಬಳಿ ಸಂಗೀತ ತರಗತಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದು, ವಾಪಸಾಗಿರಲಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಪುತ್ರಿಗಾಗಿ ಹುಡುಕಾಟ ನಡೆಸಿದ್ದರಾದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.
ಇನ್ಸ್ಟಾಗ್ರಾಂ ಖಾತೆ ಡಿಕೋಡ್: ಪುತ್ರಿಯ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದ ತಂದೆ, ಆಕೆ ಬಳಸುತ್ತಿದ್ದ ಇನ್ಸ್ಟಾಗ್ರಾಂ ಖಾತೆಯನ್ನು ಡಿಕೋಡ್ ಮಾಡಿದ್ದಾರೆ. ಆಕೆ, ವಿಶಾಲ್ ಎಂಬುವನ ಜತೆ ಪ್ರತಿನಿತ್ಯ ಚಾಟಿಂಗ್ ಮಾಡಿರುವುದು ಗೊತ್ತಾಗಿದೆ. ಈ ವೇಳೆ ವಿಶಾಲ್, ‘ನೀನು ನನಗೆ ಇಷ್ಟವಾಗಿದ್ದೀಯಾ. ನಿನ್ನ ಜತೆಗೆ ಇರಲು ಇಷ್ಟಪಡುತ್ತೇನೆ. ತುಂಬ ಪ್ರೀತಿಸುತ್ತಿರುವುದಾಗಿ ನಂಬಿಸಿದ್ದಾನೆ. ಅವನ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಬಾಲಕಿ, ತನ್ನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಬಳಿಕ ಹೈದರಾಬಾದ್ಗೆ ಬರುವಂತೆ ತಿಳಿಸಿದ್ದ. ಅಲ್ಲದೆ, ಆಕೆಯ ಹೆಸರಿನಲ್ಲಿ ವಿಮಾನ ಟಿಕೆಟ್ ಕೂಡ ಕಾಯ್ದಿರಿಸಿರುವುದು ಗೊತ್ತಾ ಗಿತ್ತು. ಈ ಸುಳಿವಿನ ಮೇರೆಗೆ ವಿಮಾನ ನಿಲ್ದಾಣಕ್ಕೆ ತೆರಳಿ ಪುತ್ರಿಯನ್ನು ರಕ್ಷಿಸಿದ್ದಾರೆ. ಬಳಿಕ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ: ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ತಯಾರಿಸಿದ್ದ ಆರೋಪಿ, ಅದರಲ್ಲಿ ಬಾಲಕಿ ಜನ್ಮದಿನಾಂಕವನ್ನು 18 ವರ್ಷ ಎಂದು ನಮೂದಿಸಿದ್ದ. ಈ ಅಂಕಪಟ್ಟಿಯನ್ನು ಬಾಲಕಿಗೆ ಕಳುಹಿಸಿ, ನೀನು ಬರುವಾಗ ಇದರ ಜತೆಗೆ 15 ಫೋಟೋಗಳು, ಆಧಾರ್ ಕಾರ್ಡ್, 10 ಸಾವಿರ ರೂ. ಹಾಗೂ ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ಬರುವಂತೆ ಹೇಳಿದ್ದ ಎಂದು ದೂರಿನಲ್ಲಿ ತಂದೆ ಉಲ್ಲೇಖಿಸಿದ್ದಾರೆ.