ಲೈಂಗಿಕ ದೌರ್ಜನ್ಯ, ಗ್ಯಾಂಗ್​ಸ್ಟರ್​​, ಲಂಚ: ಹರಿಯಾಣ ಪೊಲೀಸ್​ ಇಲಾಖೆಯ ಕರಾಳತೆ ಬಿಚ್ಚಿಟ್ಟ ಅಧಿಕಾರಿಗಳ ಆತ್ಮಹತ್ಯೆ! Haryana Police

Haryana Police
Published on

ಚಂಡೀಗಢ : ಪೊಲೀಸ್​ ಇಲಾಖೆ ಎಂದರೆ ಜನರಲ್ಲಿ ಒಂದು ನಂಬಿಕೆ ಇದೆ. ಯಾರಿಂದಲಾದರೂ ಅನ್ಯಾಯವಾದಾಗ ಪೊಲೀಸರಿಂದ ನಮಗೆ ಸೂಕ್ತ ನ್ಯಾಯ ಸಿಗುತ್ತದೆ ಮತ್ತು ಬೆದರಿಕೆ ಅಂತಾ ಬಂದಾಗ ನಮಗೆ ಸರಿಯಾದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಅದೇ ಪೊಲೀಸ್ ಇಲಾಖೆಯ ಅವ್ಯವಸ್ಥೆಗೆ ಬೇಸತ್ತು ಅಧಿಕಾರಿಗಳೇ ಆತ್ಮಹತ್ಯೆ ದಾರಿ ಹಿಡಿದಾಗ ಜನ ಸಾಮಾನ್ಯರಲ್ಲಿನ ನಂಬಿಕೆ ಸತ್ತು ಹೋಗುತ್ತದೆ. ಸದ್ಯ ಹರಿಯಾಣದ ಜನರಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಅಲ್ಲಿನ ಪೊಲೀಸ್​ ಇಲಾಖೆಯ ( Haryana Police ) ಕರಾಳತೆ ಬಯಲಾಗಿದೆ.

ಅಧಿಕಾರಿಗಳಿಗೆ ಗ್ಯಾಂಗ್​ಸ್ಟರ್​ಗಳ ನಂಟು

ಹರಿಯಾಣದ ಇಬ್ಬರು ಹಿರಿಯ ಪೊಲೀಸ್​ ಅಧಿಕಾರಿಗಳು ಸಾವಿಗೆ ಶರಣಾಗಿದ್ದು, ಅವರ ಆತ್ಮಹತ್ಯೆಯ ಸುತ್ತ ಬೆಳೆದಿರುವ ನಿಗೂಢತೆಯ ಹುತ್ತ ದಿನದಿಂದ ದಿನಕ್ಕೆ ಕಳಚಿ ಬೀಳುತ್ತಿದೆ. ಹರಿಯಾಣ ರಾಜ್ಯ ಪೊಲೀಸ್ ಇಲಾಖೆ ಒಳಗಡೆ ಜಾತಿ ತಾರತಮ್ಯ, ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪಗಳು ಕೇಳಿಬರುತ್ತಿವೆ. ಪೊಲೀಸರಿಗೆ ದರೋಡೆಕೋರರು ಅಥವಾ ಗ್ಯಾಂಗ್​ಸ್ಟರ್​ಗಳ ನಂಟು ಇದೆ ಎಂಬ ಆರೋಪಗಳು ಸಹ ಹೊರಹೊಮ್ಮಿವೆ. ಈ ಗಂಭೀರ ಆರೋಪಗಳಿಂದಾಗಿ ಹರಿಯಾಣ ಪೊಲೀಸರ ಮೇಲಿನ ಜನರ ವಿಶ್ವಾಸಾರ್ಹತೆ ಇದೀಗ ಬಿಕ್ಕಟ್ಟಿಗೆ ಸಿಲುಕಿದೆ. ಅಂದರೆ, ಯಾರನ್ನು ನಂಬುವುದು, ಬಿಡುವುದು ಅನ್ನೋ ಗೊಂದಲ ಜನರಲ್ಲಿ ಶುರುವಾಗಿದೆ.

ಇಬ್ಬರು ಅಧಿಕಾರಿಗಳ ಸಾವು

ಹಿರಿಯ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಹಿರಿಯ ಅಧಿಕಾರಿಗಳ ಮೇಲೆ ಕಿರುಕುಳ ಮತ್ತು ಜಾತಿ ತಾರತಮ್ಯ ಆರೋಪ ಹೊರಿಸಿದ್ದಾರೆ. ಈ ವಾರ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸಂದೀಪ್ ಲಾಥರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಸಾವಿಗೂ ಮುನ್ನ ತಮ್ಮ ಇಲಾಖೆಯ ಮೇಲೆ ಸಂದೀಪ್​ ಅವರು ಭ್ರಷ್ಟಾಚಾರದ ಆರೋಪ ಹೊರಿಸಿದರು. ಹೀಗಾಗಿ, ಹರಿಯಾಣ ಪೊಲೀಸ್​ ಇಲಾಖೆಯಲ್ಲಿ ಈ ಎರಡೂ ಸಾವು ವಿವಾದದ ಬಿರುಗಾಳಿ ಎಬ್ಬಿಸಿದೆ.

ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ಸಾವಿನ ಬಳಿಕ ಜನರ ಆಕ್ರೋಶ ಭುಗಿಲೆದ್ದಿದ್ದು, ಅದರ ಒತ್ತಡದ ನಡುವೆ, ಬಿಜೆಪಿ ಸರ್ಕಾರವು ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಿದೆ. ಅಲ್ಲದೆ, ರೋಹ್ಟಕ್‌ನ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜ್ರಾನಿಯಾ ಅವರನ್ನೂ ಬದಲಾಯಿಸಿದೆ. ಅಂದಹಾಗೆ, ಪೂರಣ್ ಕುಮಾರ್ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಿರುವ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಇವರೂ ಸೇರಿದ್ದಾರೆ.

ವಿಪಕ್ಷಗಳ ಆಕ್ರೋಶ

ಇನ್ನು ಐಪಿಎಸ್​ ಅಧಿಕಾರಿ ಪೂರಣ್ ಕುಮಾರ್ ಅವರ ಸಾವು ರಾಜಕೀಯ ತಿರುವು ಪಡೆದುಕೊಂಡಿದೆ. ತಮ್ಮ ಇಲಾಖೆಯಲ್ಲಿನ ತಾರತಮ್ಯದಿಂದಾಗಿ ದಲಿತರಾದ ಕುಮಾರ್ ಅವರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ತೆಗೆದುಗೊಳ್ಳಬೇಕಾಯಿತು ಎಂದು ಕಾಂಗ್ರೆಸ್ ಮತ್ತು ವಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿವೆ.

ಏನಿದು ಪ್ರಕರಣ?

2025, ಸೆಪ್ಟೆಂಬರ್ 29ರಂದು, 2001ರ ಬ್ಯಾಚ್ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರನ್ನು ಐಜಿ (ರೋಹ್ಟಕ್ ಶ್ರೇಣಿ) ಹುದ್ದೆಯಿಂದ ಸುನಾರಿಯಾ ಪೊಲೀಸ್ ತರಬೇತಿ ಕಾಲೇಜಿಗೆ ವರ್ಗಾಯಿಸಲಾಯಿತು. ಯಾವುದೇ ಸೂಚನೆಯಿಲ್ಲದೆ ಈ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಒಂದು ನಡೆ 52 ವರ್ಷದ ಪೂರಣ್​ ಅವರ ಮನಸ್ಸನ್ನು ತೀವ್ರವಾಗಿ ನೋಯಿಸಿತು. ಹೀಗಾಗಿ ಸೆಪ್ಟೆಂಬರ್ 30 ರಂದು ತಮ್ಮ ಹುದ್ದೆಯನ್ನು ತ್ಯಜಿಸಿ, ಒಂದು ವಾರ ರಜೆಯ ಮೇಲೆ ಹೋದರು. ಬಳಿಕ ಅಕ್ಟೋಬರ್ 1 ರಂದು, ಪೂರಣ್ ಕುಮಾರ್ ಅವರು ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಒ) ಸುಶೀಲ್ ಕುಮಾರ್ ಅವರೊಂದಿಗೆ ರೋಹ್ಟಕ್‌ನಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದಾಗ, ಎಎಸ್‌ಐ ಸಂದೀಪ್ ಲಾಥರ್ ಸೇರಿದಂತೆ ರೋಹ್ಟಕ್ ಪೊಲೀಸ್ ತಂಡವು ಅವರ ಕಾರನ್ನು ತಡೆಯಿತು. ಈ ವೇಳೆ ಪೂರಣ್ ಕುಮಾರ್ ಅವರ ಭದ್ರತಾ ಅಧಿಕಾರಿಯನ್ನು ಯಾವುದೇ ಎಫ್‌ಐಆರ್ ಅಥವಾ ವಾರಂಟ್ ತೋರಿಸದೆ ಬಂಧಿಸಲಾಯಿತು. ಕುಮಾರ್ ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸರು "ಮುಂದೆ, ನಿಮ್ಮ ಸರದಿ" ಎಂದು ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ. ಬಂಧನಕ್ಕೆ ಒಳಗಾಗುವ ಮೊದಲು, ಪಿಎಸ್‌ಒ ಸುಶೀಲ್ ಕುಮಾರ್ ತಮ್ಮ ಸೇವಾ ರಿವಾಲ್ವರ್ ಅನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಪೂರಣ್ ಕುಮಾರ್, ನಂತರ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ಗನ್ ಅದೇ ಎಂದು ಮೂಲಗಳು ತಿಳಿಸಿವೆ.

ಆ ಸಮಯದಲ್ಲಿ ಯಾವುದೇ ಅಧಿಕೃತ ಪ್ರಕರಣ ದಾಖಲಾಗದ ಕಾರಣ, ಪಿಎಸ್ಒ ಸುಶೀಲ್ ಕುಮಾರ್ ಅವರನ್ನು ಐದು ದಿನಗಳ ಕಾಲ ಅಕ್ರಮ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ಈ ಅವಧಿಯಲ್ಲಿ, ಪೂರಣ್ ಕುಮಾರ್ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಸುಶೀಲ್​ ಅವರನ್ನು ಹಿಂಸಿಸಲಾಯಿತು ಮತ್ತು ಒತ್ತಡ ಹೇರಲಾಯಿತು ಎಂಬ ಆರೋಪವಿದೆ. ಇದರ ನಡುವೆ, ಪೂರಣ್ ಕುಮಾರ್ ಆಗಿನ ಹರಿಯಾಣ ಡಿಜಿಪಿ ಮತ್ತು ರೋಹ್ಟಕ್ ಎಸ್ಪಿ ನರೇಂದ್ರ ಬಿಜಾರ್ನಿಯಾ ಅವರಿಗೆ ಪದೇಪದೆ ಕರೆ ಮಾಡಿ, ಮಧ್ಯಪ್ರವೇಶಿಸಿ ತಮ್ಮ ಮತ್ತು ತಮ್ಮ ಕುಟುಂಬದ ಖ್ಯಾತಿಯನ್ನು ರಕ್ಷಿಸುವಂತೆ ಕೋರಿದರು. ಆದರೆ, ಸರಿಯಾಗಿ ಸ್ಪಂದಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಅ. 6 ರಂದು ಸುಶೀಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಉದ್ಯಮಿಯೊಬ್ಬರು 2.5 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದರು. ಸುಶೀಲ್ ಕುಮಾರ್ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದ ಭಾಗವಾಗಿ ಎಎಸ್ಐ ಸಂದೀಪ್ ಲಾಥರ್ ಕೂಡ ಇದ್ದರು. ಸೈಬರ್ ತಂಡದಲ್ಲಿ ಭಾಗಿಯಾಗಿದ್ದ ಲಾಥರ್, ಸುಶೀಲ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದ ಫೋನ್ ವಿವರಗಳನ್ನು ಪಡೆದರು.

.

ಇನ್ನು ಪಿಸಿಎ ಅಡಿಯಲ್ಲಿ, ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಿಗೆ ಬಂಧನದಿಂದ ವಿಶೇಷ ವಿನಾಯಿತಿ ಇಲ್ಲ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಅಥವಾ ವಾರಂಟ್ ಪಡೆಯುವ ಮೂಲಕ ತನಿಖಾ ಸಂಸ್ಥೆ ಅವರನ್ನು ಬಂಧಿಸಬಹುದು. ಹೀಗಿರುವಾಗ ಅಕ್ಟೋಬರ್ 7 ರಂದು ಪೂರಣ್ ಕುಮಾರ್ ಚಂಡೀಗಢ ಸೆಕ್ಟರ್ 11 ರ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಕುಮಾರ್ ಬಿಟ್ಟುಹೋಗಿದ್ದಾರೆ ಎನ್ನಲಾದ ಎಂಟು ಪುಟಗಳ ಡೆತ್​ನೋಟ್​ ಕೂಡ ಪತ್ತೆಯಾಯಿತು. ಅದರಲ್ಲಿ ನಿರಂತರ ಕಿರುಕುಳ, ಅವಮಾನ ಮತ್ತು ತಮ್ಮ ಭದ್ರತಾ ಅಧಿಕಾರಿಯ ವಿರುದ್ಧ ದಾಖಲಾಗಿರುವ "ಸುಳ್ಳು ಪ್ರಕರಣ" ಅವರನ್ನು ಈ ನಿರ್ಧಾರಕ್ಕೆ ಪ್ರೇರೇಪಿಸಿದೆ ಎಂದು ಉಲ್ಲೇಖಿಸಿದ್ದಾರೆ. ತಮ್ಮ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇಲೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 8 ರಂದು, ಪೂರಣ್ ಕುಮಾರ್ ಅವರ ಪತ್ನಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್ ಅವರು ಜಪಾನ್‌ನಿಂದ ಹಿಂತಿರುಗಿ ಪೊಲೀಸ್ ದೂರು ದಾಖಲಿಸಿದರು. ಡೆತ್​ನೋಟ್​ನಲ್ಲಿ ಹೆಸರಿಸಲಾದ ಆರೋಪಿಗಳನ್ನು ಬಂಧಿಸದ ಹೊರತು ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದರು. ಪೂರಣ್ ಕುಮಾರ್ ಅವರ ಸಾವಿನ ನಂತರ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರ ಪತ್ನಿಗೆ ಪತ್ರ ಬರೆದು, ಡೆತ್​ನೋಟ್ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕುಮಾರ್​ ಅವರ ಅಧಿಕೃತ ಲ್ಯಾಪ್‌ಟಾಪ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಸಲ್ಲಿಸುವಂತೆ ಕೇಳಿಕೊಂಡಿತು. ಆದಾಗ್ಯೂ, ಅಮ್ನೀತ್ ಕುಮಾರ್ ಅವರು ಎಸ್‌ಐಟಿಗೆ ಮೂರು ಪುಟಗಳ ಪತ್ರವನ್ನು ಕಳುಹಿಸಿದ್ದು, ಅಕ್ಟೋಬರ್ 10 ರಂದು ಪೊಲೀಸರಿಗೆ ಲ್ಯಾಪ್‌ಟಾಪ್‌ ನೀಡಲಾಯಿತು ಮತ್ತು ಪೊಲೀಸರ ಐಟಿ ತಂಡವು ನಾಲ್ಕು ಗಂಟೆಗಳ ನಂತರವೂ ಡೇಟಾದ ಡಿಜಿಟಲ್ ಫಿಂಗರ್‌ಪ್ರಿಂಟ್ ಅನ್ನು ರಚಿಸಲು ವಿಫಲವಾಗಿದೆ. ಈ ಪ್ರಕರಣದಲ್ಲಿ ತನ್ನ ಸಂಪೂರ್ಣ ಸಹಕಾರದ ಹೊರತಾಗಿಯೂ ಪ್ರಕರಣವನ್ನು ಹಳಿತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಅಮ್ನೀತ್ ಕುಮಾರ್ ಅವರು ಆರೋಪಿಸಿದ್ದಾರೆ.

ಗ್ಯಾಂಗ್​ಸ್ಟರ್​ ಲಿಂಕ್​

ಕೊಲೆ ಪ್ರಕರಣದಿಂದ ಹೆಸರನ್ನು ಕೈಬಿಡಲು ಕುಖ್ಯಾತ ದರೋಡೆಕೋರ ರಾವ್ ಇಂದರ್ಜಿತ್ ಜೊತೆ ಪೂರಣ್ ಕುಮಾರ್ 50 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಎಎಸ್ಐ ಲಾಥರ್ ಅವರ ಪ್ರಮುಖ ಆರೋಪವಾಗಿತ್ತು. 'ಜೇಮ್ಸ್ ಮ್ಯೂಸಿಕ್' ಎಂಬ ಕಂಪನಿಯನ್ನು ನಡೆಸುತ್ತಿರುವ ರಾವ್ ಇಂದರ್ಜಿತ್ ಪ್ರಸ್ತುತ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾನೆ. ಅವನಿಗೆ ಹಿಮಾಂಶು ಭಾವು ಗ್ಯಾಂಗ್ ಜೊತೆ ಸಂಪರ್ಕವಿದೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ರೋಹ್ಟಕ್ ಹಣಕಾಸುದಾರ ಮಂಜೀತ್ ಕೊಲೆ ಪ್ರಕರಣದಲ್ಲಿ ಅವನ ಹೆಸರು ಕೇಳಿಬಂದಿತ್ತು. ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿಯಲ್ಲೂ ಅವನ ಹೆಸರು ಕೇಳಿಬಂದಿತ್ತು. ಗಾಯಕ ಫಜಿಲ್‌ಪುರಿಯಾ ಮೇಲಿನ ದಾಳಿಯಲ್ಲೂ ರಾವ್ ಇಂದರ್ಜಿತ್ ಹೆಸರು ಕೇಳಿಬಂದಿತ್ತು. ಪೂರಣ್ ಕುಮಾರ್ ಸಾವಿನ ಕುರಿತಾದ ಆರಂಭಿಕ ತನಿಖೆಯು ಜಾತಿ ತಾರತಮ್ಯದ ಮೇಲೆ ಕೇಂದ್ರೀಕೃತವಾಗಿದ್ದರೂ, ಎಎಸ್‌ಐ ಸಂದೀಪ್ ಲಾಥರ್ ಅವರ ಆರೋಪಗಳು ಉನ್ನತ ಮಟ್ಟದ ಭ್ರಷ್ಟಾಚಾರ ಮತ್ತು ದರೋಡೆಕೋರ ಹಾಗೂ ಪೊಲೀಸ್ ಸಂಬಂಧವನ್ನು ಬಯಲಿಗೆ ಎಳೆದಿದೆ. ಹೀಗಾಗಿ ಈ ಪ್ರಕರಣ ಇದೀಗ ಹೆಚ್ಚು ಚರ್ಚೆಯಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net