ಹೊಲಿಗೆ ಯಂತ್ರ ಆಮದು: 1.44 ಕೋಟಿ ರೂಪಾಯಿ ಕಳೆದುಕೊಂಡ್ರು!

Sewing machine
Published on

ಬೆಂಗಳೂರು: ಸಿಂಗಾಪುರದಿಂದ ಹೊಲಿಗೆ ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಮುಂದಾದ ಕಂಪನಿಗೆ ಸೈಬರ್ ಕಳ್ಳರು 1.44 ಕೋಟಿ ರೂ. ವಂಚಿಸಿದ್ದಾರೆ. ರೆಸಿಡೆನ್ಸಿ ರಸ್ತೆಯ ಐಜಿಎಂ ಪ್ರೈ.ಲಿ. ಮುಖ್ಯಸ್ಥ ಪವನ್ ಕಪೂರ್ ಈ ಬಗ್ಗೆ ಸೆಂಟಲ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಯಮೊಟೊ ಎಂಬಾತನ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಿಂಗಾಪುರದ ಕಂಪನಿಯಿಂದ ಹೊಲಿಗೆ ಯಂತ್ರಗಳನ್ನು ಆಮದು ಮಾಡಿಕೊಂಡು ಐಜಿಎಂ ಪ್ರೈ.ಲಿ. ವಹಿವಾಟು ನಡೆಸುತ್ತಿದೆ. ಕಳೆದ ನವೆಂಬರ್​ನಲ್ಲಿ 1.44 ಕೋಟಿ ರೂ. ಮೌಲ್ಯದ ವಸ್ತುಗಳ ಖರೀದಿ ಕುರಿತ ವ್ಯವಹಾರವನ್ನು ಸಿಂಗಾಪುರದ ಕಂಪನಿಯೊಂದಿಗೆ ನಡೆಸಿತ್ತು. ಕಳೆದ ಮೇ 29ರಂದು ಹಣ ವರ್ಗಾವಣೆ ಮಾಡುವಂತೆ ಸಿಂಗಾಪುರ ಕಂಪನಿ ಸೂಚನೆ ನೀಡಿತ್ತು. ಆದರೆ, ಅದರಲ್ಲಿ ಬ್ಯಾಂಕ್ ಖಾತೆ ಬದಲಾಗಿತ್ತು. ಆ ಬಗ್ಗೆ ಐಜಿಎಂ ಅಧಿಕಾರಿಗಳಿಗೆ ಅನುಮಾನ ಬಂದು, ಬ್ಯಾಂಕ್ ಖಾತೆ ಬದಲಾಗಿರುವ ಬಗ್ಗೆ ಲೆಟರ್ ಕೊಡುವಂತೆ ಸೂಚನೆ ನೀಡಿದ್ದರು. ಅದರಂತೆ ಸಿಂಗಾಪುರ ಕಂಪನಿ ಲೆಟರ್ ಸಹ ಕೊಟ್ಟಿದ್ದು, ಅದರಲ್ಲಿ ಉಲ್ಲೇಖಿಸಿರುವ ಬ್ಯಾಂಕ್ ಖಾತೆಗೆ 1.44 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಿತ್ತು. ಆದರೆ, ಜೂ.20 ಕಳೆದರೂ ವಸ್ತುಗಳು ಕಂಪನಿಗೆ ಬಂದಿಲ್ಲ. ಅನುಮಾನ ಬಂದು ಸಿಂಗಾಪುರ ಕಂಪನಿಗೆ ಕರೆ ಮಾಡಿದಾಗ ವಿಚಾರಿಸಿದಾಗ ಹಣ ವರ್ಗಾವಣೆ ಆಗಿಲ್ಲ ಎಂದು ಉತ್ತರಿಸಿದ್ದಾರೆ. ಕೊನೆಗೆ ದಿಕ್ಕು ತೋಚದೆ ಪವನ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಇಮೇಲ್ ಹ್ಯಾಕ್: ಸಿಂಗಾಪುರ್ ಕಂಪನಿಯ ಇ- ಮೇಲ್​ನ್ನು ಸೈಬರ್ ವಂಚಕರು ಹ್ಯಾಕ್ ಮಾಡಿರುವ ಸಾಧ್ಯತೆಗಳು ಹೆಚ್ಚಾಗಿದೆ. ಎರಡೂ ಕಂಪನಿಗಳು ಇ-ಮೇಲ್ ಮೂಲಕ ಎಲ್ಲ ವ್ಯವಹಾರ ನಡೆಸುತ್ತಿದ್ದವು. ಅದನ್ನು ಅರಿತ ವಂಚಕರು, ಇ-ಮೇಲ್ ಹ್ಯಾಕ್ ಮಾಡಿ ತಮ್ಮ ಬ್ಯಾಂಕ್ ಖಾತೆ ಕಳುಹಿಸಿ ಹಣ ಪಡೆದಿರುವ ಸಾಧ್ಯತೆಗಳು ಇರುವುದಾಗಿ ಸೈಬರ್ ಕ್ರೈಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net