ಬಂಡೀಮಠ ಶಿವರಾಮ ಆಚಾರ್ಯ
ನಗರದ ಮಧ್ಯಭಾಗದಲ್ಲಿರುವ ಬ್ರಹ್ಮಾವರ ಆಕಾಶವಾಣಿ ಮರುಪ್ರಸಾರ ಕೇಂದ್ರದ 23 ಎಕರೆ ಜಾಗದಲ್ಲಿ ಕನಿಷ್ಠ 15 ಎಕರೆ ಜಾಗ ಉಪಯೋಗಕ್ಕಿಲವಾಗಿದೆ. ಇಲ್ಲಿ ಆಕೇಶಿಯಾ ಮರಗಳ ಕಾಡು ಮತ್ತು ಕೊಳಚೆ ನೀರು ತುಂಬಿದ್ದು ಸಾರ್ವಜನಿಕರಿಗೆ ರೋಗ ಭೀತಿ ಎದುರಾಗಿದೆ.
ಮರುಪ್ರಸಾರ ಕೇಂದ್ರದ ಉತ್ತರಭಾಗದಲ್ಲಿ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಎಲ್ಲ ಕಡೆಯ ಕಲುಷಿತ ನೀರು ಶೇಖರಣೆಗೊಂಡು ಅಪಾಯ ಎದುರಾಗಿರುವುದಲ್ಲದೆ, ಇಲ್ಲಿನ ನೂರಾರು ಮನೆಗಳ ಸಹಸ್ರಾರು ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ವಿಸ್ತರಣೆಗೆ 3 ಅಡಿ ಅಗಲ ಜಾಗ ನೀಡಬೇಕೇಂಬ ಸಾರ್ವಜನಿಕರ ಅನೇಕ ವರ್ಷದ ಬೇಡಿಕೆಗೆ ಸರ್ಕಾರ, ಜನಪ್ರತಿನಿಧಿಗಳು ಈವೆರಗೂ ಸ್ಪಂದಿಸಿಲ್ಲ.
ಮರುಪ್ರಸಾರ ಕೇಂದ್ರದ ಮುಕ್ಕಾಲು ಭಾಗ ಉಪಯೋಗಕ್ಕೆ ಇಲ್ಲದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ಅನುಕೂಲತೆಗೆ ರಸ್ತೆ ಅಗಲೀಕರಣ ಮತ್ತು ಸ್ವಚ್ಛತಾ ಕಾರ್ಯ ಮಾಡಬೇಕಾಗಿದೆ.
ಸಂಸದ, ಡಿಸಿ ಸ್ಥಳ ಪರಿಶೀಲನೆ
ಸಾರ್ವಜನಿಕರ ಒತ್ತಾಯದ ಮೇರೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ, ಡಾ.ವಿದ್ಯಾಕುಮಾರಿ ಗುರುವಾರ ಸ್ಥಳ ಪರಿಶೀಲನೆ ಮಾಡಿದ್ದಾರೆ. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ನಾನಾ ಅಧಿಕಾರಿಗಳಾದ ಎಚ್.ವಿ.ಇಬ್ರಾಹಿಂಪುರ, ರಾಜು, ಮಹೇಂದ್ರ ಆಚಾರ್ಯ, ಆದರ್ಶ ಶೆಟ್ಟಿ, ಹಂದಾಡಿ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.
ಆಕಾಶವಾಣಿ ಮರುಪ್ರಸಾರಕೇಂದ್ರದ ಜಾಗದಲ್ಲಿ ಬೃಹತ್ ಆಕೇಶಿಯಾದ ದೊಡ್ಡ ಮರಗಳು, ಕೊಳಚೆ ನೀರು ತುಂಬಿ ಪರಿಸರವನ್ನು ಹಾಳುಮಾಡುವ, ನೀರು ತುಂಬಿದ ಜಾಗ ಸ್ವಚ್ಛಮಾಡಿದಲ್ಲಿ ಮತ್ತು ಸಾರ್ವಜನಿಕರ ಸಂಚಾರಕ್ಕೆ ರಸ್ತೆ ಅಗಲೀಕರಣಕ್ಕೆ ಒಂದಷ್ಟು ಜಾಗವನ್ನು ನೀಡಿದಲ್ಲಿ ಉಪಯುಕ್ತವಾಗುತ್ತದೆ.
ಸತೀಶ್ ಪೈ, ಸ್ಥಳೀಯರು.
ನಗರಮಧ್ಯ ಭಾಗದಲ್ಲಿರುವ ಈ ಕೇಂದ್ರದಲ್ಲಿ ಕಾಡು ಬೆಳೆದಿದ್ದು ಕಳ್ಳರಿಗೆ ವರದಾನವಾಗಿದೆ. ಮಹಿಳೆಯರು ಒಂಟಿಯಾಗಿ ಸಂಚರಿಸಲು ಭಯಪಡುತ್ತಾರೆ. ರಸ್ತೆ ಅಗಲೀಕರಣ ಹಾಗೂ ಸ್ವಚ್ಛತೆಗೆ ಸೂಕ್ತ ವ್ಯವಸ್ಥೆ ಅಗತ್ಯ
ಶೋಭಾ ಪೂಜಾರಿ, ನಿಕಟಪೂರ್ವ ಅಧ್ಯಕ್ಷರು, ಹಂದಾಡಿ ಗ್ರಾಮ ಪಂಚಾಯತಿ
ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿರುವ ತೊಂದರೆ, ಆಕಾಶವಾಣಿಯವರಲ್ಲಿ ಇರುವ ಹೆಚ್ಚುವರಿ ಸ್ಥಳದ ಕುರಿತು ಮತ್ತು ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾದ ಗಮನಕ್ಕೆ ತಂದು ಸಾರ್ವಜನಿಕರೀಗೆ ಅನುಕೂಲ ಆಗುವಂತೆ ಪ್ರಯತ್ನ ಮಾಡುತ್ತೇನೆ.
ಕೋಟ ಶ್ರೀನಿವಾಸ ಪೂಜಾರಿ, ಸಂಸದರು
https://www.vijayavani.net/ksrtc-bus-stops-at-melbandimath