

ಅಹಮದಾಬಾದ್: ಭಾರೀ ಮಳೆಯಿಂದಾಗಿ ಗುಜರಾತ್ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸೋಮವಾರ ಒಂದೇ ದಿನ 7 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಅಹಮದಾಬಾದ್, ಗಾಂಧಿನಗರ ಸೇರಿದಂತೆ ಬಹುತೇಕ ನಗರಗಳು ನೀರಿನಿಂದ ಜಲಾವೃತಗೊಂಡಿದ್ದು, ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 1 ರಿಂದ ಸುರಿದ ಭಾರೀ ಮಳೆಯಿಂದಾದ ಅನಾಹುತದಿಂದ ಈವರೆಗೆ 63ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.ನೀರಿನಿಂದ ಆವೃತವಾಗಿರುವ ಪ್ರದೇಶದಿಂದ 9000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅಹಮದಾಬಾದ್ ನಗರದಲ್ಲೇ ಬರೋಬ್ಬರಿ 219 ಮಿಮೀ ದಾಖಲೆಯ ಮಳೆಯಾಗಿದೆ. ಸದ್ಯ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಬಹುತೇಕ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಸೋಮವಾರದಿಂದಲೇ ರಜೆ ಘೋಷಿಸಲಾಗಿದೆ.
ದಕ್ಷಿಣ ಗುಜರಾತ್ನ ದಂಗ್, ನವಸರಿ, ತಪಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ನಡುವೆ ಎನ್ಡಿಆರ್ಎಫ್ ತಂಡವನ್ನು ಕೇಂದ್ರ ಕಳುಹಿಸಿಕೊಟ್ಟಿದೆ.ಅಂಬಿಕಾ ನದಿಯಲ್ಲಿ ಸಿಲುಕಿಕೊಂಡಿದ್ದ 16 ಮಂದಿಯನ್ನು ಏರ್ಲಿಫ್ಟ್ ಮಾಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ. (ಏಜೆನ್ಸೀಸ್)