ಉಪ್ಪಿನಂಗಡಿಯಲ್ಲಿ ಸರ್ವೀಸ್ ರಸ್ತೆ ಪೂರ್ಣ: ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಸಮಸ್ಯೆಗೆ ಮುಕ್ತಿ

service road
ಎತ್ತರಿಸಿದ ರಸ್ತೆಯ ಕಾಮಗಾರಿಯ ಬಳಿಯಲ್ಲಿಯೇ ಇನ್ನೊಂದು ಪಾರ್ಶ್ವದಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣ.
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಗಾಗಿ ನಿರ್ಮಿಸಲಾದ ಅಂಡರ್‌ಪಾಸ್‌ನಲ್ಲಿ ಪದೇಪದೆ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿರುವ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕಳೆದ ಮೇ 2ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ ಸ್ಥಳಕ್ಕೆ ಭೇಟಿ ನೀಡಿ ಮೇ 10ರ ಒಳಗಾಗಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕೆಂದು ನೀಡಿದ ನಿರ್ದೇಶನಕ್ಕೆ ಹೆದ್ದಾರಿ ಕಾಮಗಾರಿಯ ಅಧಿಕಾರಿಗಳು ಸ್ಪಂದಿಸಿದ್ದು, ಶುಕ್ರವಾರದಂದು ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿಯೂ ಸರ್ವೀಸ್ ರಸ್ತೆ ನಿರ್ಮಿಸಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿತ ಉಪ್ಪಿನಂಗಡಿಯಲ್ಲಿ ಹೆದ್ದಾರಿಯಲ್ಲಿ ಮಧ್ಯ ಭಾಗದಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯವೂ ಭರದಿಂದ ನಡೆಯುತ್ತಿದ್ದು, ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಏಕ ಕಾಲಕ್ಕೆ ಭಾರಿ ವಾಹನಗಳ ಆಗಮನ ಮತ್ತು ನಿರ್ಗಮನ ಸಮಸ್ಯಾತ್ಮಕವಾಗಿ ದಿನದ ಅನೇಕ ಬಾರಿ ವಾಹನ ದಟ್ಟಣೆಯುಂಟಾಗಿ ವಾಹನಗಳು ಸಂಚರಿಸಲಾರದೆ ಎಲ್ಲೆಡೆ ಬ್ಲಾಕ್ ಆಗುತ್ತಿರುತ್ತದೆ.

ಈ ಬಗ್ಗೆ ಪದೇ ಪದೆ ಸಂಭವಿಸಿದ ವಾಹನ ದಟ್ಟಣೆ ಸಮಸ್ಯೆಯ ಬಗ್ಗೆ ಪತ್ರಿಕೆಯು ಸಚಿತ್ರ ವರದಿ ಪ್ರಕಟಿಸಿತ್ತು. ಸಮಸ್ಯೆಯ ತೀವ್ರತೆ ಅರ್ಥೈಸಿದ ದ.ಕ ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು. ಅದರಂತೆ ಮೇ 2ರಂದು ಇಲಾಖಾಧಿಕಾರಿಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಎತ್ತರಿಸಿದ ರಸ್ತೆಯ ಎರಡೂ ಪಾರ್ಶ್ವದಲ್ಲಿಯೂ ಮೇ 10ರ ಒಳಗಾಗಿ ಸರ್ವೀಸ್ ರಸ್ತೆಯ ಕಾರ್ಯ ಪೂರ್ಣಗೊಳಿಸಬೇಕೆಂದೂ, ಈ ಭಾಗದಲ್ಲಿ ನಿರ್ಮಿಸಬೇಕಾಗಿರುವ ದೊಡ್ಡ ಗಾತ್ರದ ಚರಂಡಿಯ ಕಾಮಗಾರಿ ಮೇ 15ರ ಒಳಗಾಗಿ ಪೂರ್ಣಗೊಳಿಸಿ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳಬೇಕೆಂದು ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ್ದರು.

ಸಹಾಯಕ ಕಮಿಷನರ್ ನಿರ್ದೇಶದಂತೆ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ಶುಕ್ರವಾರದಂದು ಬಳಕೆಗೆ ಬಿಟ್ಟುಕೊಡಲಾಯಿತು. ಜೊತೆಗೆ ಉಪ್ಪಿನಂಗಡಿಯ ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆಗೆ ಕಾರಣವಾಗಿದ್ದ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿನ ಕಿರಿದಾದ ಮೋರಿಯನ್ನು ತೆರವುಗೊಳಿಸಿ ಬೃಹತ್ ಚೌಕಾಕಾರದ ಚರಂಡಿಯನ್ನು ಅಳವಡಿಸಲು ಎಸಿಯವರ ಕಾಲಮಿತಿಯಾದ ಮೇ 15 ರ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಚರಂಡಿ ನಿರ್ಮಾಣದ ಕಾಮಗಾರಿಗೂ ಶುಕ್ರವಾರ ಚಾಲನೆ ನೀಡಲಾಯಿತು.

ಕಾಮಗಾರಿಯ ಬಗ್ಗೆ ನಿಗಾ ಇರಿಸಿದ್ದ ಉಪ್ಪಿನಂಗಡಿ ವರ್ತಕ ಸಂಘದ ಪದಾಧಿಕಾರಿ ಕೈಲಾರ್ ರಾಜಗೋಪಾಲ ಭಟ್, ಹೆದ್ದಾರಿ ಕಾಮಗಾರಿ ನಿರತ ಅಧಿಕಾರಿಗಳು ಪುತ್ತೂರು ಸಹಾಯಕ ಕಮಿಷನರ್ ನೀಡಿದ ಸಮಯ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಿರುವುದು ವ್ಯವಸ್ಥೆಯ ಬಗ್ಗೆ ನಾಗರಿಕರ ವಿಶ್ವಾಸ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net