ಮಹಾನಗರ ಪಾಲಿಕೆ ಎರಡು ತಿಂಗಳಾದರೂ ರಸ್ತೆಗಿಳಿಯದ ತ್ರಿಚಕ್ರ ವಾಹನ

mng--12 may Mcc auto 2
Published on

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ತೆರಳಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಉದ್ದೇಶದಿಂದ ಖರೀದಿಸಲಾದ 24 ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಎರಡು ತಿಂಗಳಿನಿಂದ ಪಾಲಿಕೆ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ. ಇನ್ನೂ ರಸ್ತೆಗಿಳಿಯದೇ ಇರುವುದರಿಂದ ಕೆಲವು ಚಕ್ರಗಳು ಪಂಕ್ಚರ್ ಆಗಿವೆ.


ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಗಲ್ಲಿ ಪ್ರದೇಶಗಳಿದ್ದು, ಅವುಗಳಿಗೆ ಈ ಹಿಂದಿನ ತ್ಯಾಜ್ಯ ಸಾಗಾಟ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದೇ ಕಾರಣದಿಂದಾಗಿ ಅಂತಹ ಪ್ರದೇಶಗಳಿಗೆ ತೆರಳಬಲ್ಲ ತ್ರಿಚಕ್ರ ವಾಹನಗಳನ್ನು ಪಾಲಿಕೆ ಖರೀದಿಸಿ ಸುಸೂತ್ರವಾಗಿ ತ್ಯಾಜ್ಯ ಸಂಗ್ರಹ ಪ್ರಕ್ರಿಯೆಗೆ ಕೈಹಾಕಿದೆ. ಅಲ್ಲದೆ ಇಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವೂ ಹೌದು.


ಮಹಿಳಾ ಚಾಲಕಿಯರು:
ಪಾಲಿಕೆಯು ಈ ಬಾರಿ ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದು ಮಹಿಳಾ ಚಾಲಕಿಯರ ನೇಮಿಸುವ ಮೂಲಕ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳಾ ಪೌರ ಕಾರ್ಮಿಕರಿದ್ದಾರೆ. ಈ ಕಾರಣದಿಂದ ತ್ರಿಚಕ್ರ ವಾಹನಗಳನ್ನು ಮಹಿಳಾ ಚಾಲಕಿಯರ ಮೂಲಕ ನಿರ್ವಹಿಸುವುದು ಪಾಲಿಕೆಯ ಸದ್ಯದ ಯೋಜನೆ. ಮಹಿಳಾ ಸಿಬಂದಿಯನ್ನು ಈ ರೀತಿ ಬಳಸಿಕೊಳ್ಳುವ ಮೂಲಕ ಪಾಲಿಕೆಗೆ ಎದುರಾಗುವ ಚಾಲಕರ ಹೆಚ್ಚುವರಿ ಹೊರೆಯನ್ನು ಕೂಡ ನಿಭಾಯಿಸಬಹುದು ಎಂಬುವುದು ಲೆಕ್ಕಾಚಾರ.


ವಾಹನ ದಟ್ಟನೆಯಿರುವ ಮಂಗಳೂರಿನಲ್ಲಿ ವಾಹನಗಳನ್ನು ಕೊಂಡೊಯ್ಯುವುದು ಸಾಹಸ. ಅದರಲ್ಲೂ ಅನೇಕ ಪೌರ ಕಾರ್ಮಿಕರಿಗೆ ಹೊಸ ಅವಕಾಶವೊಂದು ಕುದುರಿದಂತಾಗಿದೆ. ಆಯ್ದ ಮಹಿಳಾ ಪೌರ ಕಾರ್ಮಿಕರಿಗೆ ತರಬೇತಿ ನೀಡುವ ಕಾರ್ಯ ಪ್ರಗತಿಯಲ್ಲಿದೆ.


ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿ:
ಹೊಸ ವಾಹನಗಳನ್ನು ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ನೊಂದಣಿ ಮಾಡುವ ಹಿನ್ನೆಲೆಯಲ್ಲಿ ಈಗಾಗಲೇ ದಾಖಲೆಗಳನ್ನು ಇರಿಸಿ ಅರ್ಜಿ ಸಲ್ಲಿಸಲಾಗಿದೆ. ಒಂದೆರಡು ತಿಂಗಳಲ್ಲಿ ನೊಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇವುಗಳ ಜತೆ ಚಾಲಕಿಯರಿಗೆ ಚಾಲನ ಪರವಾಣಿಗೆಗೆ ಅರ್ಜಿ ಸಲ್ಲಿಸಲಾಗಿದ್ದು, ಸಂಪೂರ್ಣ ತರಬೇತಿಯ ಬಳಿಕ ವಾಹನಗಳು ರಸ್ತೆಗೆ ಇಳಿಯುವ ಸಾಧ್ಯತೆಗಳಿವೆ.


ನಿರ್ವಹಣೆ ಸುಲಭ: ಇಲೆಕ್ಟ್ರಿಕ್ ವಾಹನವಾಗಿರುವ ಹಿನ್ನೆಲೆ ನಿರ್ವಹಣೆ ಸುಲಭ, ಇಂಧನ ಉಳಿತಾಯ. 250 ಕೆ.ಜಿ. ಸಂಗ್ರಹಣೆ ಸಾಮಾರ್ಥ್ಯ, ರಸ್ತೆ ಬದಿಯಿಂದಲೂ ತ್ಯಾಜ್ಯ ಸಂಗ್ರಹಕ್ಕೆ ಅವಕಾಶ. ಗಲ್ಲಿ, ಓಣಿಗಳಿಗೆ ತೆರಳಲು ಸಲೀಸು ಎನ್ನುವುದು ಅಧಿಕಾರಿಗಳ ಮಾತು.
ತ್ಯಾಜ್ಯ ಸಂಗ್ರಹಕ್ಕೆ 24 ನೂತನ ತ್ರಿಚಕ್ರವಾಹನಗಳನ್ನು ಖರೀದಿಸಿರುವ ಪಾಲಿಕೆ ಇಲ್ಲಿಯ ವರೆಗೆ ಅವುಗಳನ್ನು ರಸ್ತೆಗಿಳಿಸಿಲ್ಲ. ಎಲ್ಲಾ ವಾಹನಗಳು ಪಾಲಿಕೆಯ ವಠಾರದಲ್ಲೇ ಲಂಗರು ಹಾಕಿವೆ. ಈಗಾಗಲೇ ಟಯರ್‌ಗಳು ಪಂಕ್ಚರ್ ಆಗಿದ್ದು, ಶೀಘ್ರ ರಸ್ತೆಗಿಳಿಯದಿದ್ದರೆ ತುಕ್ಕು ಹಿಡಿಯುವ ಸಾಧ್ಯತೆ ಇದೆ.

ಕಸ ಸಂಗ್ರಹಕ್ಕೆ ತ್ರಿಚಕ್ರ ವಾಹನಗಳನ್ನು ಖರೀದಿಸಲಾಗಿದೆ. ಹೊಸ ಟೆಂಡರ್ ಕರೆಯಲಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ವರ್ಕ್ ಆರ್ಡರ್ ವಿಳಂಬವಾಗಲಿದೆ. ಮಹಿಳಾ ಚಾಲಕಿಯರ ತರಬೇತಿ ಪೂರ್ಣಗೊಳಿಸಿ, ಅಧಿಕಾರಿಗಳು ಮುಂದಿನ ಕ್ರಮ ವಹಿಸಲಿದ್ದಾರೆ.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net