ಕಾವ್ಯ ಪ್ರಪಂಚದಲ್ಲಿ ಬಹುಜ್ಞತೆ ಸಾಧಿಸಿದ್ದ ‘ಕಾಡುವ ಕಿರಂ’; ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಮತ

ಬೆಂಗಳೂರು: ಕನ್ನಡ ಕಾವ್ಯ ಪ್ರಪಂಚಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಎಲ್ಲ ಮಜಲುಗಳಲ್ಲೂ ಕೆಲಸ ಮಾಡುವ ಮೂಲಕ ಕಾವ್ಯ ಮೀಮಾಂಸೆಯ ಪರಿಭಾಷೆಯಲ್ಲಿ ಬಹುಜ್ಞತೆ ಸಾಧಿಸಿದ್ದ ಅಪರೂಪದ ವ್ಯಕ್ತಿ ಕಿ.ರಂ.ನಾಗರಾಜು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ೌಂಡೇಶನ್, ಕಿರಂ ಪ್ರಕಾಶನದ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾಡುವ ಕಿರಂ ಅಹೋರಾತ್ರಿ ಕಾರ್ಯಕ್ರಮದಲ್ಲಿ ಕಿರಂ ಕವಿತೆಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಿರಂ ಅವರು ಕಾವ್ಯವ ಆಳಕ್ಕೆ ಇಳಿದಿದ್ದ ಸಾಹಿತ್ಯ ಜಂಗಮ. ಸಾಹಿತ್ಯದ ಓದು ಮತ್ತು ರಂಗಭೂಮಿಯಲ್ಲಿ ಅವರ ಅನುಭವ ಅಪಾರ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಿರಂ ನೇತೃತ್ವದಲ್ಲಿ ನಡೆದ ‘ಕನ್ನಡ ಕಾವ್ಯ ಪರಂಪರೆ’ ಎಂಬ 10 ದಿನಗಳ ಕಮ್ಮಟ ಕನ್ನಡ ವಿವಿ ಇತಿಹಾಸದಲ್ಲೇ ಒಂದು ಮೈಲುಗಲ್ಲು. ಕವಿರಾಜ ಮಾರ್ಗದಿಂದ ಹಿಡಿದು, ಪಂಪ, ರನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಹೀಗೆ ಎಲ್ಲ ಕಾಲಘಟ್ಟದ ಕವಿ-ಕಾವ್ಯಗಳನ್ನು ಅಧ್ಯಯನ ಮಾಡಿ ಅವುಗಳ ಕಾವ್ಯಾಂಶ ಕುರಿತು ದಿನಗಟ್ಟಲೆ ಮಾತನಾಡಬಲ್ಲ ಸಾಮರ್ಥ್ಯ ಕಿರಂ ಅವರಲ್ಲಿತ್ತು.

ಕನ್ನಡ ಸಾಹಿತ್ಯದಲ್ಲಿರುವ ಕಾವ್ಯದ ಎಲ್ಲ ಹೂರಣಗಳ ಒಳಹೊಕ್ಕು ವಿಮರ್ಶೆ ಮಾಡುತ್ತಿದ್ದ ಕಿರಂ ಪ್ರಕಾರ ‘ಕಾವ್ಯ ಎಂದರೆ ಜನಪದ ಆಟದಂತಿರಬೇಕು’ ಎನ್ನುತ್ತಿದ್ದರು. ಸಾಹಿತ್ಯವನ್ನು ತಮ್ಮ ಎದೆಯಲ್ಲಿ ತುಂಬಿಕೊಂಡಿದ್ದ ಕಿರಂ, ಸಿದ್ಧಲಿಂಗಯ್ಯರಂತಹ ದಲಿತ ಬಂಡಾಯ ಸಾಹಿತಿಯ, ‘ಇಕ್ಕರಲಾ, ಒದೀರಲಾ. ಚಮಡ ಎಬ್ರುಲಾ’ ಎಂಬ ಕಾವ್ಯವನ್ನು ವಿಶ್ಲೇಷಣೆಗೊಳಪಡಿಸಿ ಸಿಟ್ಟು ಕೂಡಾ ಕಾವ್ಯದ ವಸ್ತುವಾಗುತ್ತದೆ ಎಂಬ ಹೊಸ ವ್ಯಾಖ್ಯಾನವನ್ನು ನೀಡಿದ್ದರು ಎಂದರು.

ಸಮಾರಂಭದಲ್ಲಿ ಕಿ.ರಂ.ನಾಗರಾಜ 2024 ಪ್ರಶಸ್ತಿಯನ್ನು ಪರಿಸರ, ವೈಚಾರಿಕತೆ ಕ್ಷೇತ್ರದಿಂದ ಡಾ.ಎಚ್.ಆರ್.ಸ್ವಾಮಿ, ಚಿತ್ರಕಲೆಗಾಗಿ ಪ್ರೊ.ಎಂ.ಜೆ.ಕಮಲಾಕ್ಷಿ, ಜಾನಪದ ಕ್ಷೇತ್ರದ ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಹೋರಾಟ ಕ್ಷೇತ್ರದಿಂದ ರಾಮದೇವ ರಾಕೆ, ಸಂಸ್ಕೃತಿ ಚಿಂತನೆ ಕ್ಷೇತ್ರದಿಂದ ಡಾ.ಬಂಜಗೆರೆ ಜಯಪ್ರಕಾಶ್ ಮತ್ತು ಕಾ.ತ.ಚಿಕ್ಕಣ್ಣ ಅವರಿಗೆ ನೀಡಿ ಗೌರವಿಸಲಾಯಿತು. ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಅಹೋರಾತ್ರಿ ಕಿರಂ ಅವರ ಕಾವ್ಯ, ನೃತ್ಯ, ಗಾಯನ, ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಡಾ.ಎಲ್.ಎನ್.ಮುಕುಂದರಾಜ್, ಡಾ.ಎಲ್. ಹನುಮಂತಯ್ಯ, ಕಿರಂ ಪುತ್ರಿಯರಾದ ಕೆ.ಎನ್.ಸಹನ, ಕೆ.ಎನ್.ಕವನ, ಕೆ.ಎನ್.ಚಂದನ, ಡಾ.ಪ್ರದೀಪ್ ಮಾಲ್ಗುಡಿ ಮತ್ತಿತರರು ಉಪಸ್ಥಿತರಿದ್ದರು.

ಕಾವ್ಯ ಪ್ರಪಂಚದಲ್ಲಿ ಬಹುಜ್ಞತೆ ಸಾಧಿಸಿದ್ದ 'ಕಾಡುವ ಕಿರಂ'; ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಮತ
ಕಾವ್ಯ ಪ್ರಪಂಚದಲ್ಲಿ ಬಹುಜ್ಞತೆ ಸಾಧಿಸಿದ್ದ 'ಕಾಡುವ ಕಿರಂ'; ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಮತ 2

ಕಾವ್ಯ ಜಾಗತಿಕ ಧರ್ಮವಾಗಬೇಕು

ಜಗತ್ತಿನ ಯುದ್ಧಗಳಿಗೆ ಧರ್ಮವೇ ಕಾರಣವಾಗಿದ್ದು, ಇರುವ ಎಲ್ಲ ಧರ್ಮಗಳು ಲಯವಾಗಿ ಕಾವ್ಯ ಎಲ್ಲರ ಧರ್ಮವಾಗಬೇಕು ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು. ಕಾವ್ಯಕ್ಕೆ ಯಾವುದೇ ಜಾತಿ ಮತದ ಸಂಕೋಲೆ ಇಲ್ಲ ಈ ತತ್ವದಡಿಯಲ್ಲಿ ಕೆಲಸ ಮಾಡಿದ್ದಕ್ಕಾಗಿಯೇ ಭೌತಿಕವಾಗಿ ನಮ್ಮನ್ನಗಲಿ 14 ವರ್ಷ ಕಳೆದರೂ ಕಿ.ರಂ. ನಮ್ಮನ್ನೆಲ್ಲಾ ಇಂದಿಗೂ ಕಾಡುತ್ತಿದ್ದಾರೆ. ಭಾಷೆ ಮತ್ತು ಸಂವೇದನೆಯಲ್ಲಿ ತಾಜಾತನ ಇದ್ದರೆ ಅದು ಉತ್ತಮ ಕಾವ್ಯ ಎನಿಸಿಕೊಳ್ಳುತ್ತದೆ ಎಂಬ ಕಿರಂ ವಿಶ್ಲೇಷಣೆ ಸಾರ್ವಕಾಲಿಕ ಸತ್ಯ ಎಂದರು.

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…