ಚಂಡೀಗಢದಲ್ಲಿ ಹಿರಿಯ 'ಐಪಿಎಸ್' ಅಧಿಕಾರಿ ಗುಂಡು ಹಾರಿಸಿಕೊಂಡು ಆ*ತ್ಮಹತ್ಯೆ | officer dead

ips
Published on

ಚಂಡೀಗಢ: ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ.ಪೂರಣ್ ಕುಮಾರ್ ಅವರು ಇಂದು (ಅ.07) ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ವರದಿಗಳಲ್ಲಿ, ಕುಮಾರ್ ಸ್ವತಃ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಚಂಡೀಗಢದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಇಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವೈ.ಪೂರಣ್ ಕುಮಾರ್ ಅವರ ದುರಂತ ಸಾವಿನ ಬಳಿಕ ಹರಿಯಾಣ ಪೊಲೀಸ್ ಮತ್ತು ಆಡಳಿತ ವಲಯದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ಭದ್ರತೆಯನ್ನು ಒದಗಿಸಿದ್ದು, ಈ ಕಠಿಣ ಕ್ರಮ ಕೈಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. 2001 ರ ಬ್ಯಾಚ್‌ನ ಹರಿಯಾಣ ಕೇಡರ್‌ನ ಐಪಿಎಸ್ ಅಧಿಕಾರಿ ಮತ್ತು ಎಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದ ವೈ. ಪೂರಣ್ ಕುಮಾರ್, ಚಂಡೀಗಢದ ಸೆಕ್ಟರ್ 11 ರಲ್ಲಿರುವ ಅವರ ಮನೆ ಸಂಖ್ಯೆ 116 ರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ವಿಧಿವಿಜ್ಞಾನ ಮತ್ತು ತನಿಖಾ ತಂಡಗಳು ಈಗ ಘಟನಾ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿವೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂದು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಐಎಎಸ್ ಅಧಿಕಾರಿ ಆಗಿರುವ ಇವರ ಪತ್ನಿ ಅಮನ್ ಪಿ.ಕುಮಾರ್ ಪ್ರಸ್ತುತ ದೇಶದಿಂದ ಹೊರಗಿದ್ದಾರೆ. ಅವರು ಅಕ್ಟೋಬರ್ 5 ರಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಅಧಿಕಾರಿಗಳೊಂದಿಗೆ ಜಪಾನ್‌ಗೆ ಹೋಗಿದ್ದು, ಮತ್ತು ನಾಳೆ ಸಂಜೆ ಭಾರತಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಕುಮಾರ್ ಅವರಂತಹ ಹಿರಿಯ ಅಧಿಕಾರಿಯ ಅಕಾಲಿಕ ಮರಣ, ಪೊಲೀಸ್ ಇಲಾಖೆ ಮತ್ತು ನಾಗರಿಕ ಸೇವಾ ವಲಯವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಅವರನ್ನು ಶಿಸ್ತುಬದ್ಧ ಮತ್ತು ಸಮರ್ಪಿತ ಅಧಿಕಾರಿ ಎಂದು ಸ್ಮರಿಸಿಕೊಂಡು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net