ಸೇನಾಪುರ ರೈಲ್ವೆ ನಿಲ್ದಾಣ ಮೂಲೆಗುಂಪು!

gan-3
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ವ್ಯಾಪ್ತಿಯ ಸೇನಾಪುರ ರೈಲ್ವೇ ನಿಲ್ದಾಣ ಮೂಲೆಗುಂಪಾಗುತ್ತಿದೆ. ಪ್ಯಾಸೆಂಜರ್ ರೈಲುಗಳು ಮಾತ್ರವಲ್ಲದೆ ಪ್ರಮುಖ ರೈಲುಗಳನ್ನು ನಿಲುಗಡೆ ಮಾಡಬೇಕೇಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

2023ರ ಅಕ್ಟೋಬರ್ ಬಳಿಕ ನಿರ್ಲಕ್ಷೃಕ್ಕೊಳಗಾಗುತ್ತಲೇ ಇರುವ ಸೇನಾಪುರ ರೈಲ್ವೆ ನಿಲ್ದಾಣಕ್ಕೆ ಮರುಜೀವ ನೀಡಬೇಕು, ಪ್ರಮುಖ ರೈಲುಗಳ ನಿಲುಗಡೆಗೊಳಿಸಬೇಕು ಎಂದು ಜನಾಂದೋಲನ ನಡೆದಿತ್ತು. ಜನರ ಒತ್ತಡಕ್ಕೆ ಮಣಿದ ಶಾಸಕರು, ಸಂಸದರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ವರ್ಷ ಎರಡು ಉರುಳಿದರೂ ಬೇಡಿಕೆ ಈಡೇರದ ಕಾರಣ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಲು ಸಜ್ಜಾಗಿದ್ದಾರೆ.

ರೈಲ್ವೇ ನಿಲ್ದಾಣ ಸಮೀಪ ಸುಮಾರು 30 ಗ್ರಾಮಗಳಿದ್ದು, ಇಲ್ಲಿಂದ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರು, ಕೇರಳ, ಮುಂಬೈ ಹಾಗೂ ಗೋವಾಕ್ಕೆ ತೆರಳುವವರಿದ್ದಾರೆ. ಊರಿಗೆ ಹಿಂದಿರುಗುವ ಸಂದರ್ಭ ಇವರು 20-25 ಕಿ.ಮೀ ದೂರದ ಕುಂದಾಪುರ ಅಥವಾ ಬೈಂದೂರಿನಲ್ಲಿ ಇಳಿದು ದುಪ್ಪಟ್ಟು ಹಣ ಕೊಟ್ಟು ಖಾಸಗಿ ವಾಹನದಲ್ಲಿ ಬರಬೇಕಾಗುತ್ತದೆ.

ಗಮನ ಸೆಳೆದಿದ್ದ ಹೋರಾಟ: ಸೇನಾಪುರ ರೈಲ್ವೆ ನಿಲ್ದಾಣ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಗಂಗೊಳ್ಳಿ ಮೀನುಗಾರಿಕೆ ಬಂದರು, ತ್ರಾಸಿ-ಮರವಂತೆ ಕಡಲ ತೀರ ನಿಲ್ದಾಣಕ್ಕೆ ನಿಕಟವಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಸುತ್ತಾ ಬಂದಿರುವ ಹೋರಾಟವು ಕೊಂಕಣ ರೈಲ್ವೆ, ಭಾರತೀಯ ರೈಲ್ವೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಮುಂದಿಟ್ಟ ಬೇಡಿಕೆಗಳಲ್ಲಿ ಒಂದೂ ಈವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು, ರೈಲ್ವೆ ಹೋರಾಟ ಸಮಿತಿ ಸದಸ್ಯರು ಬೇಸರ ಹೊರಹಾಕಿದ್ದಾರೆ.

ಸೇನಾಪುರ ರೈಲು ನಿಲ್ದಾಣ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಪ್ರಮುಖ ರೈಲುಗಳ ನಿಲುಗಡೆಯಾಗುತ್ತಿಲ್ಲ. ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲು, ಪ್ಯಾಸೆಂಜರ್ ರೈಲಿಗೆ ನಿಲುಗಡೆಗೊಳಿಸಬೇಕೆಂಬ ಬೇಡಿಕೆಗೆ ಸಂಸದ ಬಿ.ವೈ.ರಾಘವೇಂದ್ರ ಸ್ಪಂದಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಲ್ಲಿ ನಿಯೋಗ ತೆರಳಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಹೋರಾಟ ಸಮಿತಿಯ ನಿಯೋಗ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಿದೆ. -ರಾಜೀವ ಪಡುಕೋಣೆ, ಸಂಚಾಲಕ, ಸೇನಾಪುರ ರೈಲ್ವೆ ನಿಲ್ದಾಣ ಹೋರಾಟ ಸಮಿತಿ

- ಪ್ರಮುಖ ರೈಲುಗಳ ನಿಲ್ದಾಣಕ್ಕೆ ಮತ್ತೆ ಹೆಚ್ಚಿದ ಬೇಡಿಕೆ - ಹಿಂದೆ ಜನಾಂದೋಲನಕ್ಕೆ ಮಣಿದು ಬೇಡಿಕೆ ಈಡೇರಿಕೆಯ ಭರವಸೆ - ಎರಡು ವರ್ಷ ಕಳೆದರೂ ಈಡೇರದ ಭರವಸೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net