

ವಿಜಯವಾಣಿ ಸುದ್ದಿಜಾಲ ಕುಂದಾಪುರ
ತ್ರಾಸಿ-ಮರವಂತೆ ಕಡಲ ತೀರಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ಭೇಟಿ ನೀಡಿದರು. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಪ್ರವಾಸೋದ್ಯಮ ಪೂರಕ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದ ಬಳಿಕ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೊಲ್ಲೂರು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಒಂದು ತಿಂಗಳ ಹಿಂದೆ ಶಾಸಕರು ಹಾಗೂ ಮುಖಂಡರೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಸಾಸಿ(ಸ್ಪೆಶಲ್ ಅಸಿಸ್ಟೆಂಟ್ ಫಾರ್ ದ ಸ್ಟೇಟ್ ಫಾರ್ ಕ್ಯಾಪಿಟಲ್ ಡೆವೆಲಪ್ಮೆಂಟ್ ಫಾರ್ ಇನ್ಫಾ ಸ್ಟ್ರಕ್ಚರ್) ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿದೆ. ಸಚಿವರೇ ಖುದ್ದಾಗಿ ಈ ಸ್ಥಳಗಳಿಗೆ ಭೇಟಿ ನೀಡಿದ್ದು, ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸ್ವದೇಶಿ ದರ್ಶನ್ ಯೋಜನೆಯಡಿ ತ್ರಾಸಿ-ಮರವಂತೆಗೆ 112 ಕೋಟಿ ರೂ., ಪಡುವರಿ-ಸೋಮೇಶ್ವರಕ್ಕೆ 100 ಕೋಟಿ ರೂ. ಹಾಗೂ ಕೊಲ್ಲೂರಿಗೆ 100 ಕೋಟಿ ರೂ. ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದ ತ್ರಾಸಿ-ಮರವಂತೆ ಮತ್ತು ಪಡುವರಿ-ಸೋಮೇಶ್ವರ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ ಎಂದು ಸಂಸದರು ಹೇಳಿದರು.
ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಪ್ರವಾಸೋದ್ಯಮ ಇಲಾಖೆ ಕಮಿಷನರ್ ರಾಜೇಂದ್ರ ಕೆ.ವಿ., ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಸುರೇಶ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ವೆಂಕಟೇಶ ಕಿಣಿ, ಜಿಲ್ಲಾ ಮತ್ತು ಬೈಂದೂರು ಮಂಡಲದ ಬಿಜೆಪಿ ಮುಖಂಡರು, ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.