

ವಿಜಯವಾಣಿ ಸುದ್ದಿಜಾಲ ಕಾರ್ಕಳ
ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇಶದ ವೈವಿಧ್ಯವನ್ನು ಏಕತೆಗೆ ಜೋಡಿಸುವ ಕೆಲಸವನ್ನು ಧಾರ್ಮಿಕ ಕೇಂದ್ರಗಳು ಮಾಡುತ್ತಿವೆ. ಕಾರ್ಕಳದ ಪ್ರೇಕ್ಷಣೀಯ ಸ್ಥಳಗಳನ್ನು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಕಾರ್ಕಳದ ಆನೆಕೆರೆ ಬಸದಿ ಹಾಗೂ ರಾಮಸಮುದ್ರ ಕೆರೆಯನ್ನು ಗುರುವಾರ ವೀಕ್ಷಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಕಾರ್ಕಳದ ಆನೆಕೆರೆ ಬಸದಿ, ರಾಮಸಮುದ್ರ ಹಾಗೂ ವರಂಗ ಬಸದಿಗಳ ಸಮಗ್ರ ಅಭಿವೃದ್ಧಿಗೆ ಶಾಸಕ ಸುನೀಲ್ ಕುಮಾರ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒಟ್ಟು 116 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಮೂರೂ ಕ್ಷೇತ್ರಗಳನ್ನು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಶಾಸಕ ವಿ.ಸುನೀಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕಾರ್ಕಳ ತಹಸೀಲ್ದಾರ್ ಪ್ರದೀಪ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಬಿಜೆಪಿ ಹಿರಿಯ ಮುಖಂಡ ಎಂ.ಕೆ.ವಿಜಯ ಕುಮಾರ್, ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಆಂತೋನಿ ಡಿಸೋಜ ನಕ್ರೆ, ಆನೆಕೆರೆ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಉದ್ಯಮಿ ಮಹೇಂದ್ರ ವರ್ಮ ಜೈನ್, ಸಂಪತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಕುಮಾರ್ ಜೈನ್, ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಮಹಾವೀರ್ ಜೈನ್ ಶಿರ್ಲಾಲು, ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜೈನ ಸಮುದಾಯದ ಪ್ರಮುಖರಾದ ಎನ್.ಪ್ರಭಾತ್, ದೇವರಾಜ್ ಅಧಿಕಾರಿ, ಜಗದೀಶ್ ಹೆಗ್ಡೆ, ಪುರಸಭೆ ಮಾಜಿ ಸದಸ್ಯ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರದೀಪ್ ನಿರೂಪಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಮೂರು ಪ್ರವಾಸಿತಾಣಗಳ ಅಭಿವೃದ್ಧಿಗೆ ಈಗಾಗಲೇ ನೀಲಿನಕಾಶೆ ಸಿದ್ಧಪಡಿಸಿ, ಮೊದಲನೇ ಹಂತದಲ್ಲಿ 60 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 56 ಕೋಟಿ ರೂ. ಸೇರಿ ಒಟ್ಟು 116 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ಆನೆಕೆರೆ ಬಸದಿಯಲ್ಲಿ ವಾಕಿಂಗ್ ಟ್ರಾೃಕ್, ಕೇಬಲ್ ಕಾರು, ಲೈಟಿಂಗ್ ಅಳವಡಿಸುವ ಹಾಗೂ ಈ ತಾಣವನ್ನು ಸಂಪೂರ್ಣ ಪರಿಸರಸ್ನೇಹಿಯಾಗಿ ಮಾಡುವ ಗುರಿ ಹೊಂದಲಾಗಿದೆ. ವಿ.ಸುನೀಲ್ ಕುಮಾರ್, ಶಾಸಕ https://www.vijayavani.net/protecting-historical-monuments-is-our-responsibility https://www.vijayavani.net/warning-to-those-sleeping-under-shastri-circle-flyover