ವಿಜಯವಾಣಿ ಸುದ್ದಿಜಾಲ ಬೈಂದೂರು
ಇತ್ತೀಚೆಗಿನ ವರ್ಷಗಳಲ್ಲಿ ಮಾಧ್ಯಮಗಳು ಲಗಾಮಿಲ್ಲದೇ ಮುನ್ನುಗ್ಗುತ್ತಿರುವುದು ಅಪಾಯಕಾರಿ. ಸಮಾಜದ ಸ್ವಾಸ್ಥೃ ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೆಚ್ಚಿಸುವ ಅಗತ್ಯ ಎಂದು ಮಣಿಪಾಲದ ಮಾಹೆ ಗಾಂಯನ್ ಸೆಂಟರ್ ಫಾರ್ ಫಿಲೋಸೋಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು.
ಬೈಂದೂರು ಉತ್ಸವದ ಅಂಗವಾಗಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿವೃದ್ಧಿ ಪತ್ರಿಕೋದ್ಯಮ ವಾಸ್ತವ, ಸವಾಲು ಮತ್ತು ಸಾಧ್ಯತೆಗಳು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಪತ್ರಕರ್ತ ಲಕ್ಷ್ಮೀ ಮಚ್ಚಿನ ‘ಕರಾವಳಿ ಪತ್ರಿಕೋದ್ಯಮದ ಸವಾಲು’ ಬಗ್ಗೆ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆ ಓದುವವರ ಸಂಖ್ಯೆ ತೀರಾ ವಿರಳ, ಸುಮಾರು 30ರಿಂದ 60 ವರ್ಷದ ಪ್ರಾಯದ ಜನರು ಡಿಜಿಟಲ್ ಮಾಧ್ಯಮ ಕಡೆಗೆ ವಾಲಿಕೊಂಡಿದ್ದು ಆತಂಕಕಾರಿ ಸಂಗತಿ. ಪ್ರಚಲಿತ ಸವಾಲಿನೊಂದಿಗೆ ಪತ್ರಕರ್ತ ನಿತ್ಯ ಸೆಣಸಬೇಕಿದೆ ಎಂದರು.
ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ. ಎಸ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಸ್. ಜನಾರ್ದನ ಮರವಂತೆ, ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆಯೂರು, ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕೋಶಾಕಾರಿ ಸುನೀಲ್ ಎಚ್. ಜಿ. ನಿರೂಪಿಸಿದರು. ನರಸಿಂಹ ಬಿ.ನಾಯಕ್ ವಂದಿಸಿದರು.