ಪಡುಬಿದ್ರಿ: ಸಮಾಜದಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹುಮುಖ್ಯ, ವಿದ್ಯೆಯ ಜತೆ ಜತೆಯಲ್ಲಿ ಸಂಸ್ಕಾರದ ಅಗತ್ಯವೂ ಇದೆ, ಮನೆಯ ಲಕ್ಷ್ಮೀ ಅಂತಿರುವ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಪೊಲಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ ಅಂಗವಾಗಿ ಗುರುವಾರ ಹದಿಹರೆಯದ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆ ಮತ್ತು ವೃತ್ತಿ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ಪ್ರತಿಭಾ ಆರ್.ಮಾತನಾಡಿ, ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ವೃತ್ತಿ ಸಮಾಲೋಚನೆ ಅಗತ್ಯ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಾವೇ ಸಮರ್ಥರಾಗಬೇಕು, ಹೆಣ್ಣು ಅಬಲೆ ಅಲ್ಲ ಸಬಲೆ, ಸಾಧನೆ ಮಾಡಲು ಗುರಿ ಇರಬೇಕು ಎಂದರು.
ಕರಾಟೆ ಶಿಕ್ಷಕ ರಾಜಶೇಖರ್, ಸೌಜನ್ಯಾ ಶೆಟ್ಟಿ, ಸುಲೋಚನಾ ಮಾಹಿತಿ ನೀಡಿದರು. ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಸದಸ್ಯೆ ರಾಧಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಬಿ.ಹಾದಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ವಿ.ನಾಯ್ಕ, ಪೊಲಿಪು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಶುಭಾ, ಪೂರ್ಣಿಮಾ, ಪ್ರಮೀಳಾ, ಶಾರದಾ ವೈ ದೀಪಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಶಿವಲಿಂಗಪ್ಪ ವಂದಿಸಿದರು.