ಪಡುಬಿದ್ರಿ: ಬೆಳಪು ವ್ಯವಸಾಯ ಸಹಕಾರಿ ಸಂಘದ ಚುನಾವಣೆಯಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ಬಳಗದ ಎಲ್ಲ 12 ಮಂದಿ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಮುಂದಿನ ಅವಧಿಗೆ ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಬೆಳಪು ಹಾಗೂ ಉಪಾಧ್ಯಕ್ಷರಾಗಿ ದ್ಯುಮಣಿ ಆರ್.ಭಟ್ ಉಚ್ಚಿಲ ಅವಿರೋಧವಾಗಿ ಆಯ್ಕೆಯಾದರು. ಆ ಮೂಲಕ ದೇವಿಪ್ರಸಾದ್ ಸತತ 9ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘದ ಪಣಿಯೂರು ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ, ಜಿಲ್ಲೆಯ ಪ್ರತಿಷ್ಟಿತ ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ 21ನೇ ವಯಸ್ಸಿನಲ್ಲಿ ನಿರ್ದೇಶಕನಾಗಿ ಚುನಾವಣೆಯಲ್ಲಿ ಆಯ್ಕೆಯಾಗಿ ನಂತರ ನಿರಂತರವಾಗಿ ಕಳೆದ 33 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಚುನಾವಣಾ ರಹಿತವಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ. ಪ್ರಸ್ತುತ ಮತ್ತೆ 9ನೇ ಅವಧಿಗೆ ಆಡಳಿತ ಮಂಡಳಿ ಸದಸ್ಯರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವುದು ಸಹಕಾರಿ ಕ್ಷೇತ್ರದಲ್ಲೊಂದು ಇತಿಹಾಸ. ಸಂಘದ ಸದಸ್ಯರು ನಮ್ಮ ಮೇಲಿಟ್ಟಿರುವ ವಿಶ್ವಾಸಾರ್ಹತೆ ಮತ್ತು ಪ್ರೀತಿಯಿಂದ ಮಾತ್ರ ದೀರ್ಘಾವಧಿ ಸೇವೆ ಮಾಡಲು ಅವಕಾಶವಾಗಿದೆ. ಅವಿರೋಧ ಆಯ್ಕೆಯಿಂದ ಸಂಘಕ್ಕೆ ಸುಮಾರು 3 ಲಕ್ಷ ರೂ. ಚುನಾವಣಾ ವೆಚ್ಚ ಉಳಿತಾಯವಾಗಲಿದ್ದು, ಇದನ್ನು ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗುವುದು. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಹಕರಿಸುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಂಘದ ಅಭೂತಪೂರ್ವ ಯಶಸ್ಸು ಸಾಧಿಸಲು ಸಿಬ್ಬಂದಿ ಸೇವಾ ಬದ್ಧತೆ ಕಾರಣವಾಗಿದ್ದು, ಸಂಘದಲ್ಲಿ ಎಲ್ಲ ಸೌಕರ್ಯಗಳೊಂದಿಗೆ ಸರ್ವ ರೀತಿಯ ಸಾಲದ ವ್ಯವಸ್ಥೆ ಸದಸ್ಯರಿಗೆ ಸರಳ ರೀತಿಯಲ್ಲಿ ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಹಕಾರವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. ಸಂಘವು ಉಚ್ಚಿಲ ಬಡಾ, ಎಲ್ಲೂರು ಮತ್ತು ಬೆಳಪು ಗ್ರಾಮದ ಗ್ರಾಮಸ್ಥರ ಆರ್ಥಿಕ ಸಂಕಷ್ಟಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಪಕ್ಷಾತೀತವಾಗಿ ಸರ್ವರ ಜನಮನ್ನಣೆ ಗಳಿಸಲು ಸಹಕಾರಿ. ಮುಂದೆ ಇನ್ನಷ್ಟು ಹೊಸ ಯೋಜನೆ ರೂಪಿಸುವ ಯೋಜನೆ ಇದೆ ಎಂದರು.
ನಿರ್ದೇಶಕರಾದ ಪಾಂಡು ಶೆಟ್ಟಿ, ಸಾಧು ಶೆಟ್ಟಿ ಪಣಿಯೂರು, ಆಲಿಯಬ್ಬ, ಗೋಪಾಲ ಪೂಜಾರಿ, ಪಾಂಡು ಎಂ.ಶೇರಿಗಾರ, ಸೈಮನ್ ಡಿಸೋಜ, ಸುಂದರಿ, ವಿಮಲಾ ಅಂಚನ್, ಅನಿತಾ ಆನಂದ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ, ಎಸ್‌ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್, ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.