ಸುಗುಣೇಂದ್ರ ತೀರ್ಥ ಶ್ರೀ ಆಶೀರ್ವಚನ
ಆಯುರ್ವೇದ ಉಚಿತ ಶಿಬಿರ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಹೆಚ್ಚಿನ ಜನರು ದೈಹಿಕ ತಪಾಸಣೆ ಮಾಡಿಸಿದರೆ ರೋಗ ಇರುವುದು ಗೊತ್ತಾಗಿ ಸುಮ್ಮನೆ ಒತ್ತಡವಾಗುತ್ತದೆ, ಹಣ ರ್ಖಚಾಗುತ್ತದೆ ಎಂದು ತಪಾಸಣೆಯನ್ನೇ ಮಾಡಿಸುವುದಿಲ್ಲ. ಇದು ತಪ್ಪು ಕ್ರಮ. ಸ್ವಯಂ ಔಷಧ ಸೇವಿಸುವ ಮೊದಲು ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ದೇಹಕ್ಕೆ ಯಾವ ಕಾಯಿಲೆ ಇದೆ ಎಂದು ಸ್ಪಷ್ಟವಾಗಿ, ಅದಕ್ಕೆ ಸೂಕ್ತವಾದ ಔಷಧ, ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಬೆಂಗಳೂರಿನ ಉಪಾಧ್ಯ ಆಯುರ್ವೇದ ಕಂಪನಿ, ಉಪಾಧ್ಯ ಹೆಲ್ತ್ ಕೇರ್ ಹಾಗೂ ಶ್ರೀಕೃಷ್ಣ ಮಠದ ಧನ್ವಂತರಿ ಚಿಕಿತ್ಸಾಲಯದ ಸಹಕಾರದಲ್ಲಿ ಸಾರ್ವಜನಿಕರಿಗಾಗಿ ಭಾನುವಾರ ಆಯೋಜಿಸಿದ್ದ ಆಯುರ್ವೇದ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವೈದ್ಯರಾಗಿದ್ದ ಸುಜ್ಞಾನೇಂದ್ರ ತೀರ್ಥರು

ನಮ್ಮ ಗುರುಗಳಾದ ಸುಜ್ಞಾನೇಂದ್ರ ತೀರ್ಥ ಶ್ರೀಪಾದರು ಆಯುರ್ವೇದ ವೈದ್ಯರಾಗಿದ್ದರು. ಪುತ್ತಿಗೆ ಮಠದಿಂದ ಆಯುರ್ವೇದ ಸೇವೆಯೂ ನಡೆದಿದೆ. ಉಡುಪಿಯ ಮೊಟ್ಟ ಮೊದಲ ಆಯುರ್ವೇದ ಕಾಲೇಜು ನಮ್ಮಗುರುಗಳ ನೇತೃತ್ವದಲ್ಲಿ ಪಾಡಿಗಾರು ಮಠದಲ್ಲಿ ಆರಂಭಗೊಂಡಿದ್ದು, ಬಳಿಕವೇ ಅದು ಉಡುಪಿಯಲ್ಲಿ ಬೆಳೆದಿದೆ. ಪಾಡಿಗಾರು ಮಠದಲ್ಲಿ ಶ್ರೀಗಳು ಅನೇಕ ಬಗೆಯ ಆಯುರ್ವೇದ ಸಸ್ಯ ಬೆಳೆಸಿ, ಔಷಧ ತಯಾರಿಸುತ್ತಿದ್ದರು. ಆನೆಕಾಲು ರೋಗಕ್ಕೆ ಪರಿಣಾಮಕಾರಿ ಔಷಧವನ್ನೂ ಕಂಡುಹಿಡಿದಿದ್ದರು. ಹೀಗಾಗಿ ಪುತ್ತಿಗೆ ಮಠಕ್ಕೂ ಆಯುರ್ವೇದ ಶಾಸ್ತ್ರಕ್ಕೂ ವಿಶೇಷ ಸಂಬಂಧವಿದ್ದು, ನಮ್ಮ ಪರ್ಯಾಯದಲ್ಲಿ ಆಯುರ್ವೇದ ಶಿಬಿರ ಆಯೋಜಿಸಿದ್ದೇವೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಪಾಧ್ಯ ಆಯುರ್ವೇದ ಕಂಪನಿಯ ಮುಖ್ಯಸ್ಥ ರಾಮಚಂದ್ರ ಉಪಾಧ್ಯ, ಪುತ್ತಿಗೆ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ಶಿಬಿರದ ವೈದ್ಯರುಗಳಾದ ಡಾ. ಬಿ.ವಿ. ಶೇಷಾದ್ರಿ, ಡಾ. ಗೋಪಾಲಕೃಷ್ಣ, ಡಾ. ರಜನೀಶ್ ಗಿರಿ, ಡಾ. ಸ್ಮಿತಾ, ಡಾ. ಲಕ್ಷ್ಮೀಪ್ರಕಾಶ್, ಡಾ. ವಿಠ್ಠಲಾಚಾರ್ಯ, ಡಾ. ಲಕ್ಷ್ಮೀಪ್ರಸಾದ್, ಡಾ.ಕಿಶನ್, ಡಾ. ಗೀತಾ, ಡಾ. ಸತೀಶ್ ರಾವ್ ಉಪಸ್ಥಿತರಿದ್ದರು.
ಡಾ. ಶ್ಯಾಮಸುಂದರ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಠದ ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರೆಗೆ ನಡೆದ ಶಿಬಿರದಲ್ಲಿ ಸ್ಥಳೀಯರು ಹಾಗೂ ಉಡುಪಿಗೆ ಆಗಮಿಸಿದ್ದ ಬೇರೆ ರಾಜ್ಯಗಳ ಪ್ರವಾಸಿ ಯಾತ್ರಿಕರೂ ಸೇರಿ 800ಕ್ಕೂ ಅಧಿಕ ಜನರು ಉಚಿತ ತಪಾಸಣೆ ಹಾಗೂ ಔಷಧ ಸ್ವೀಕರಿಸಿದರು. ಅನೇಕ ಆಯುರ್ವೇದ ಕಂಪನಿಗಳು ಸಹಕರಿಸಿದವು.