ಲಖನ್​ಗೆ ಟಿಕೆಟ್, ಸಿಎಂಗೆ ರಮೇಶ್ ಬೇಡಿಕೆ; ಪರಿಷತ್ ಚುನಾವಣೆಗೆ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು

werrewewrewr
Published on

ಬೆಂಗಳೂರು: ಲಖನ್ ಜಾರಕಿಹೊಳಿ ಅವರಿಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ನೀಡುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಶನಿವಾರ ಬೆಂಗಳೂರಿನ ಆರ್​ಟಿ ನಗರದ ಸಿಎಂ ನಿವಾಸದಲ್ಲಿ ಬೊಮ್ಮಾಯಿ ಅವರನ್ನು ಸಹೋದರನೊಂದಿಗೆ ಭೇಟಿಯಾದ ರಮೇಶ್ ಜಾರಕಿಹೊಳಿ ಸುಮಾರು 10 ನಿಮಿಷ ಚರ್ಚೆ ನಡೆಸಿದರು.

ಸರ್ಕಾರದ ಮುಖ್ಯ ಸಚೇತಕ ಮಹಂತೇಶ್ ಕವಟಗಿಮಠ ಈಗಾಗಲೆ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಇದರ ನಡುವೆಯೇ ಜಾರಕಿಹೊಳಿ ಸಹೋದರನಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕಿಂತ ಆತಂಕಕ್ಕೆ ಕಾರಣವಾಗಿದೆ. ಎರಡನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದರೆ ತಾವು ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೇರಿ ಗೆಲ್ಲಿಸಿಕೊಂಡು ಬರುವುದಾಗಿ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯು ದ್ವಿಸದಸ್ಯ ಕ್ಷೇತ್ರವನ್ನು ಹೊಂದಿದ್ದು ಸ್ಥಳೀಯ ಸಂಸ್ಥೆಗಳಿಂದ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ.

ಈಗಿರುವ ಬಲಾಬಲದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ದ್ವಿಸದಸ್ಯ ಕ್ಷೇತ್ರಗಳಲ್ಲಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸಬೇಕೆಂದು ಬಿಜೆಪಿ ನಿರ್ಧರಿಸಿದೆ. ಬೆಳಗಾವಿಯಲ್ಲಿ ಲಖನ್ ಅವರಿಗೆ ಟಿಕೆಟ್ ನೀಡದೇ ಅವರೇನಾದರೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ಪಕ್ಷದ ಅಧಿಕೃತ ಅಭ್ಯರ್ಥಿಯ ಪರಿಸ್ಥಿತಿ ಏನಾಗಬಹುದೆಂಬುದು ಪಕ್ಷದಲ್ಲಿ ಉಂಟಾಗಿರುವ ಆತಂಕವಾಗಿದೆ. ರಾಜ್ಯಾಧ್ಯಕ್ಷರ ಜತೆಗೆ ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಭವಾನಿ ಸ್ಪರ್ಧೆ ಬಹುತೇಕ ಖಚಿತ:

ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್​ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ ಭವಾನಿ ರೇವಣ್ಣ ಕಣಕ್ಕಿಳಿಯುವುದು ಖಚಿತವಾಗಿದೆ. ಗೌಡರ ಕುಟುಂಬದ ಸದಸ್ಯರು ಸ್ಪರ್ಧಿಸುವುದರಿಂದ ಜೆಡಿಎಸ್ ಶಾಸಕರು, ಪ್ರಮುಖರು ಎಲ್ಲ ರೀತಿಯಿಂದಲೂ ಪ್ರಬಲವಾಗಿ ನಿಂತು ಚುನಾವಣೆ ನಡೆಸುತ್ತಾರೆ. ಅದಕ್ಕೆ ಪ್ರತಿಯಾಗಿ ಸರಿಸಮನಾದ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿರುವ ಕಾಂಗ್ರೆಸ್ ಚನ್ನರಾಯಪಟ್ಟಣ ಎಪಿಎಂಸಿ ನಿರ್ದೇಶಕ, ಉದ್ಯಮಿ ಎಂ.ಶಂಕರ್ ಅವರನ್ನು ಹುರಿಯಾಳಾಗಿಸುವ ಆಲೋಚನೆಯಲ್ಲಿದೆ. ಇನ್ನೊಂದೆಡೆ ಹಾಲಿ ಎಂಎಲ್​ಸಿ ಎಂ.ಎ.ಗೋಪಾಲಸ್ವಾಮಿ ಅವರಿಗೂ ಸಿದ್ಧವಿರಲು ಸೂಚನೆ ನೀಡಿದ್ದು, ಭಾನುವಾರ ಅಭ್ಯರ್ಥಿ ಘೊಷಣೆಯಾಗುವ ಸಾಧ್ಯತೆಯಿದೆ. ಗ್ರಾಪಂ ಸದಸ್ಯರ ಸಂಖ್ಯೆಯನ್ನು ನಂಬಿ ಚುನಾವಣೆ ಗೆಲ್ಲಲಾಗದ ಸ್ಥಿತಿಯಲ್ಲಿರುವ ಬಿಜೆಪಿ ಹೊರಗಿನಿಂದ ಪ್ರಬಲರನ್ನು ಕರೆತಂದು ಟಿಕೆಟ್ ನೀಡುವ ಆಲೋಚನೆಯಲ್ಲಿದೆ.

ನನ್ನ ಮಗನ ಸ್ಪರ್ಧೆ ಇಲ್ಲ:

ನಾನು ಸಚಿವನಾಗಿ ಇರುವವರೆಗೂ ನನ್ನ ಪುತ್ರ ಕೆ.ಇ.ಕಾಂತೇಶ್ ವಿಧಾನಸಭೆ ಇಲ್ಲವೆ ಪರಿಷತ್ ಚುನಾವಣೆಗೆ ಸ್ಪರ್ಧಿಸ ಬಾರದು ಎಂಬುದು ನನ್ನ ಸ್ಪಷ್ಟ ತೀರ್ಮಾನ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಕಾಂತೇ್ ಟಿಕೆಟ್ ಆಕಾಂಕ್ಷಿ ಎಂಬ ಸುದ್ದಿ ಹರಡಿದೆ. ನನ್ನ ಪುತ್ರನಿಗೆ ಈಗ ಟಿಕೆಟ್ ಬೇಡ ಎಂದು ದೆಹಲಿ ನಾಯಕರಿಗೆ ತಿಳಿಸಿದ್ದೇನೆ. ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೂ ಹೇಳಿದ್ದೇನೆ ಎಂದರು.

ಜಿಟಿಡಿ ಕುಟುಂಬಕ್ಕೆ ಟಿಕೆಟ್, ಸಾ.ರಾ. ಆಫರ್ ತಿರಸ್ಕಾರ:

ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್​ಗೆ ನಡೆಯುವ ಚುನಾವಣೆಗೆ ನಮ್ಮ ಪಕ್ಷದ ಶಾಸಕ ಜಿ.ಟಿ. ದೇವೇಗೌಡರ ಕುಟುಂಬದವರೇ ಅಭ್ಯರ್ಥಿ ಆಗಬಹುದು ಎಂದು ಶಾಸಕ ಸಾ.ರಾ. ಮಹೇಶ್ ಶನಿವಾರ ಅಚ್ಚರಿ ಹೇಳಿಕೆ ನೀಡಿದರು. ನಮ್ಮ ಪಕ್ಷದ ಬಲವರ್ಧನೆಗೆ ಜಿಟಿಡಿ ಅವರ ಕುಟುಂಬ ಸಾಕಷ್ಟು ಶ್ರಮಿಸಿದೆ. ಆದ್ದರಿಂದ ಅವರ ಕುಟುಂಬದ ಸದಸ್ಯರೊಬ್ಬರು ಅಭ್ಯರ್ಥಿಯಾದರೂ ಆಗಬಹುದು ಎಂದರು. ಈ ಹೇಳಿಕೆ ಬೆನ್ನಲ್ಲೇ, ನಮ್ಮ ಕುಟುಂಬದಿಂದ ಯಾರು ಸಹ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜಿ.ಟಿ. ದೇವೇಗೌಡ ಸ್ಪಷ್ಟ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net